ಬರೋಬ್ಬರಿ 15 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆಪಾದಿತನನ್ನು ತಪ್ಪಿತಸ್ಥ ಎಂದು ತೀರ್ಪಿತ್ತ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು, ಆತನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಶರಣಾಗತನಾಗಲು ಸೂಚಿಸಿದೆ.
ಆಗಸ್ಟ್ 1, 2007ರಲ್ಲಿ ಅಕೋಲಾದ ಸೆಶನ್ಸ್ ನ್ಯಾಯಾಧೀಶರು ಗಂಗಾರಾಮ್ ಅಲಿಯಾಸ್ ನರೇಂದ್ರ ದೇವಿದಾಸ್ ಇಂಗೋಲೆ ಎಂಬ ವ್ಯಕ್ತಿಗೆ ಒಂದು ವರ್ಷ ಜೈಲು ಹಾಗೂ 1,000 ರೂ.ಗಳ ದಂಡ ವಿಧಿಸಿದ್ದರು.
ಪದವೀಧರರಿಗೆ ಗುಡ್ ನ್ಯೂಸ್: ರಾಜ್ಯ ಹೈಕೋರ್ಟ್ ನಲ್ಲಿ ಖಾಲಿ ಇರುವ 150 ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಏನಿದು ಕೇಸು ?
2007ರಲ್ಲಿ ವಿಠ್ಠಲ್ ದಾನಾಜಿ ಎಂಬಾತ ಇಂಗೋಲೆಗೆ 20 ರೂ.ಗಳ ಸಾಲ ಕೊಟ್ಟಿದ್ದರು. ಈ ಮೊತ್ತವನ್ನು ಮರಳಿ ಕೊಡಲು ಕೆಲ ದಿನಗಳ ಬಳಿಕ ಇಂಗೋಲೆಗೆ ಬೇರೊಬ್ಬ ವ್ಯಕ್ತಿಯ ಮುಂದೆ ದಾನಾಜಿ ಕೇಳಿದ್ದರು. ಇದರಿಂದ ಇಂಗೋಲೆಗೆ ಮುಜುಗರ ಉಂಟಾಗಿದೆ.
ಈ ಸಿಟ್ಟಿನಿಂದ ದಾನಾಜಿ ಮೇಲೆ ಇಂಗೋಲೆ ಹಲ್ಲೆ ಮಾಡಿದ್ದರು. ಇದರ ಬೆನ್ನಿಗೆ ಇಲ್ಲಿನ ಮುತಿಜ಼ಾಪುರ ಪೊಲೀಸ್ ಠಾಣೆಗೆ ದಾನಾಜಿಯನ್ನು ಕರೆದೊಯ್ದು ಇಂಗೋಲೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಿಸಿದ ಕಾರಣ ಇನ್ನಷ್ಟು ಕುಪಿತನಾದ ಇಂಗೋಲೆ, ದಾನಾಜಿ ಮೇಲೆ ಅದೇ ರಾತ್ರಿ ಮತ್ತೊಮ್ಮೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ದಾನಾಜಿ ಮೃತಪಟ್ಟಿದ್ದಾರೆ.
ದಾನಾಜಿ ಪುತ್ರ ಬಾಲು ಐಪಿಸಿಯ 302 (ಕೊಲೆ), 504 (ಶಾಂತಿ ಕಾಪಾಡಲು ಉದ್ದೇಶಪೂರಕವಾಗಿ ಅವಮಾನ ಮಾಡುವುದು), ಮತ್ತು 506 (ಬೆದರಿಕೆಯೊಡ್ಡುವುದು) ವಿಧಿಗಳ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಕೊಲೆಗೆ ಆಪಾದಿತ ಕಾರಣನಾಗಿದ್ದು, ಆತನಿಗೆ ಹೀಗೆ ಮಾಡಬೇಕೆಂಬ ಉದ್ದೇಶವಿರಲಿಲ್ಲ ಎಂದು ಸೆಶನ್ಸ್ ಕೋರ್ಟ್ ತೀರ್ಪಿತ್ತು, ಈ ಕಾರಣದಿಂದ ಇಂಗೋಲೆ ವಿರುದ್ಧ ಕೊಲೆಯ ಆರೋಪ ಹೊರಿಸಲು ಬರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದರು. ಹೀಗಾಗಿ ಸೆಶನ್ಸ್ ಕೋರ್ಟ್ ಇಂಗೋಲೆಯನ್ನು ಐಪಿಸಿಯ 323ನೇ ವಿಧಿ (ಉದ್ದೇಶಪೂರಿತವಾಗಿ ಗಾಯಗೊಳಿಸುವುದು) ಅಡಿ ತಪ್ಪಿತಸ್ಥ ಎಂದು ತೀರ್ಪಿತ್ತಿತ್ತು.
ಅದಾಗಲೇ ಕೇಸಿನ ಸಂಬಂಧ ಬಹಳಷ್ಟು ಕಾಲ ಕಳೆದಿರುವ ಕಾರಣ ಇಂಗೋಲೆಗೆ ಕೊಟ್ಟಿರುವ ಶಿಕ್ಷೆಯ ಅವಧಿ ಕಡಿಮೆ ಮಾಡಲು ಆತನ ಪರ ವಕೀಲ ಎಬಿ ಮಿರ್ಜ಼ಾ ವಾದ ಮುಂದಿಟ್ಟಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ರೋಹಿತ್ ಬಿ ದೇವ್, “ಹೀಗೆ ಮಾಡಲು ನನಗಂತೂ ಯಾವ ಕಾರಣವೂ ತಿಳಿಯುತ್ತಿಲ್ಲ. ಅಮೂಲ್ಯವಾದ ಜೀವವೊಂದು ಹೋಗಿದೆ. 20 ರೂ.ಗಳನ್ನು ಮರಳಿ ಕೊಡುವಂತೆ ಕೇಳಿದ್ದಕ್ಕೆ ಸಂತ್ರಸ್ತನ ಮೇಲೆ ದಾಳಿ ಮಾಡಿದ್ದಲ್ಲದೇ, ಆತನ ಕುಟುಂಬಸ್ಥರಿಗೂ ಬೆದರಿಕೆಯೊಡ್ಡಿದ ಆಪಾದಿತ ಮತ್ತೊಮ್ಮೆ ದಾಳಿ ಮಾಡಿದ್ದಾನೆ. ಇಲ್ಲಿ ಯಾವುದೇ ರೀತಿಯ ಕರುಣೆಯನ್ನೂ ತೋರುವಂತಿಲ್ಲ,” ಎಂದಿದ್ದಾರೆ.