ಮುಂಬೈ: ಮುಂಬೈನ ಪಶ್ಚಿಮ ಉಪನಗರದಲ್ಲಿರುವ ಮುಂಬೈ ಮೆಟ್ರೋ ರೈಲು ನಿಲ್ದಾಣದ ಹೆಸರನ್ನು ‘ಪಠಾಣ್‌ವಾಡಿ’ಯಿಂದ ದಿಂಡೋಶಿ ಎಂದು ಬದಲಾಯಿಸಿರುವ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮುಂಬೈ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ಪೀಠವು, ಅರ್ಜಿದಾರರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ, ನೀವು ಯಾವ ಸಾರ್ವಜನಿಕ ಹಿತಾಸಕ್ತಿಗಳನ್ನು ಪೂರೈಸಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.
ಸಮಿತಿಯ ವರದಿಯನ್ನು (ಎಂಎಂಆರ್‌ಡಿಎ) ಕೋರ್ಟ್ನಲ್ಲಿ ಪ್ರಶ್ನಿಸಬಹುದೆ? ರೈಲ್ವೇ ನಿಲ್ದಾಣಕ್ಕೆ ಹೆಸರು ಬದಲಾಯಿಸುವಂತೆ ಕೋರಿರುವುದು ಸಾರ್ವಜನಿಕ ಹಿತಾಸಕ್ತಿ ಆಗುತ್ತದೆಯೇ ಎಂದು ಪ್ರಶ್ನಿಸಿದ ಕೋರ್ಟ್, ಯಾವ ಉದ್ದೇಶಕ್ಕೆ ಇಂಥದ್ದೊಂದು ಅರ್ಜಿಯನ್ನು ಸಲ್ಲಿಸಿರುವಿರಿ ಎಂದು ಪ್ರಶ್ನಿಸಿದೆ.
ಈ ಬಗ್ಗೆ ವಕೀಲರು ಸೂಕ್ತ ಉತ್ತರ ಕೊಡದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿದ ಕೋರ್ಟ್, ಈ ಪ್ರಶ್ನೆಗೆ ಉತ್ತರಿಸುವಂತೆ ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣಗಳಿಗೆ ಹೆಸರಿಸುವುದಕ್ಕೆ ಸಂಬಂಧಿಸಿದಂತೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ರೂಪಿಸಿದ ನೀತಿಯನ್ನು ನಿಲ್ದಾಣಕ್ಕೆ ನಿಯೋಜಿಸಿದ ಹೆಸರು ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಸಂಸ್ಥೆಯೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
‘ಪಠಾಣ್‌ವಾಡಿ’ ಮೆಟ್ರೋ ನಿಲ್ದಾಣವನ್ನು ‘ದಿಂಡೋಶಿ’ ಎಂದು ಮರುನಾಮಕರಣ ಮಾಡಿರುವುದು ಎಂಎಂಆರ್‌ಡಿಎ ರೂಪಿಸಿದ ನೀತಿಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಕೋರ್ಟ್ ಈ ಪ್ರಶ್ನೆಗಳನ್ನು ಮುಂದಿಟ್ಟಿದೆ.
ಈ ಅರ್ಜಿಯ ವಿಚಾರಣೆಗೂ ಮುನ್ನ ಕೋರ್ಟ್, ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಬೇಕಾದರೆ 1 ಲಕ್ಷ ರೂಪಾಯಿ ಠೇವಣಿ ಮಾಡುವಂತೆ ಸೂಚಿಸಿತ್ತು. ಅದರಂತೆ ಠೇವಣಿ ಇಟ್ಟ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.