ಮುಂಬೈ: ಹಿಜಾಬ್ ಮತ್ತು ಇತರ ಧಾರ್ಮಿಕ ಗುರುತನ್ನು ನಿಷೇಧಿಸಿದ ಚೆಂಬೂರಿನ ಆಚಾರ್ಯ ಮತ್ತು ಮರಾಠೆ ಕಾಲೇಜಿನ ಡ್ರೆಸ್ ಕೋಡ್ ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಈ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನಾವು ಒಲವು ಹೊಂದಿಲ್ಲ. ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಪೀಠ ಹೇಳಿದೆ.
ಜೂನ್‌ನಿಂದ ಪ್ರಾರಂಭವಾದ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬರಲಿರುವ ಡ್ರೆಸ್ ಕೋಡ್ ಪ್ರಕಾರ, ಬುರ್ಖಾಗಳು, ನಿಖಾಬ್‌ಗಳು, ಹಿಜಾಬ್‌ಗಳು ಅಥವಾ ಯಾವುದೇ ಧಾರ್ಮಿಕ ಗುರುತುಗಳಾದ ಬ್ಯಾಡ್ಜ್ ಗಳು, ಕ್ಯಾಪ್ ಗಳನ್ನು ಕಾಲೇಜಿನೊಳಗೆ ಅನುಮತಿಸಲಾಗುವುದಿಲ್ಲ ಎಂದು ಷರತ್ತು ವಿಧಿಸಲಾಗಿದೆ.
ಕಾಲೇಜು ಕ್ಯಾಂಪಸ್‌ನಲ್ಲಿ ಹುಡುಗರಿಗೆ ಪೂರ್ಣ ಅಥವಾ ಅರ್ಧ ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದಾಗಿದೆ. ಹುಡುಗಿಯರು ಯಾವುದೇ ಭಾರತೀಯ/ಪಾಶ್ಚಿಮಾತ್ಯ ಬಹಿರಂಗಪಡಿಸದ ಉಡುಗೆ ಧರಿಸಬಹುದು.
ನ್ಯಾಯಮೂರ್ತಿಗಳಾದ ಅತುಲ್ ಎಸ್. ಚಂದೂರ್ಕರ್ ಮತ್ತು ರಾಜೇಶ್ ಎಸ್. ಪಾಟೀಲ್ ಅವರ ವಿಭಾಗೀಯ ಪೀಠವು ಕಾಲೇಜಿನ ಒಂಬತ್ತು ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯ ಮೇಲೆ ಜೂನ್ 19 ರಂದು ವಾದವನ್ನು ಮುಕ್ತಾಯಗೊಳಿಸಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಆದೇಶ ನೀಡಿದ್ದು, ವಿದ್ಯಾರ್ಥಿಗಳ ಮನವಿ ವಜಾಗೊಳಿಸಲಾಗಿದೆ.