ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು, ಬೆಳಗಾವಿ ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಡಿಐಜಿಪಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಆರೋಪಿ ಸುಳಿವು ಪತ್ತೆಯಾಗಿದೆ.
ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಅವರಿಗೆ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದನಲದೇ, ಬೆಂಗಳೂರು ಕೇಂದ್ರ ಕಾರಾಗೃಹ ಹಾಗೂ ಬೆಳಗಾವಿ ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಆರೋಪಿ ಯಾರೆಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಆರೋಪಿಯನ್ನು ಕಿರಣ್ ಮೋಷಿ ಎಂದು ಗುರುತಿಸಲಾಗಿದೆ. ಆದರೆ ಆತ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಿರಣ್ ಮೋಷಿ (48) ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಿವಾಸಿ . ಈತ 2022ರಲ್ಲಿ ಬೇರೆಯವರ ಅಕೌಂಟ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಆರೋಪದಲ್ಲಿ ಈತನನ್ನು ಬಂಧಿಸಲಾಗಿತ್ತು. 10 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿದ್ದ. ಈಗ ಜಸ್ಟ್ ಡಯಲ್ ಮೂಲಕ ಸರ್ಕಾರಿ ಅಧಿಕಾರಿಗಳ ನಂಬರ್ ಪಡೆದು ಪತ್ನಿಯ ಹೆಸರಲ್ಲಿನ ಸಿಮ್ ನಿಂದ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.