ಬೆಂಗಳೂರು : ನಗರದ 60 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಹಿನ್ನೆಲೆ ಇಂದು ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗಳಿಗೆ ದೌಡಾಯಿಸಿದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನಾಳೆ ಬೆಂಗಳೂರಿನ ಯಾವುದೇ ಶಾಲೆಗಳಿಗೆ ರಜೆ ಇಲ್ಲ, ಪ್ರಕರಣ ಅಷ್ಟು ಗಂಭೀರತೆ ಪಡೆದಿಲ್ಲ. ಪೋಷಕರು ಭಯ ಪಡುವ ಅಗತ್ಯವಿಲ್ಲ, ತುರ್ತು ಅನಿವಾರ್ಯತೆ ಇದ್ದರೆ ಶಿಕ್ಷಣ ಇಲಾಖೆ ರಜೆ ನೀಡುತ್ತದೆ ಎಂದು ನಗರ ಜಿಲ್ಲಾಧಿಕಾರಿ ಕೆ. ದಯಾನಂದ್ ಹೇಳಿದ್ದಾರೆ.
ಶಿಕ್ಷಣ ಸಚಿವರು ಹೇಳಿದ್ದೇನು..?
ಬೆಂಗಳೂರಿನ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಪ್ರಕರಣವನ್ನು ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆದರಿಕೆ ಬಂದಿರುವ ಶಾಲೆಗಳಿಗೆ ರಕ್ಷಣೆ ಕೊಡುತ್ತೇವೆ. ಈ ಬಗ್ಗೆ ಗೃಹ ಸಚಿವರ ಜೊತೆ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ ಎಂದರು,
ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಜೊತೆಯಾಗಿ ಕೆಲಸ ಮಾಡುತ್ತಿವೆ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಯಾರು ಹೆದರುವುದು ಬೇಡ ಧೈರ್ಯವಾಗಿರಿ ಎಂದು ಸಚಿವರು ತಿಳಿಸಿದ್ದಾರೆ. ಬೆಂಗಳೂರಿನ 60 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.