ದಿವಂಗತ ನಟ ರಿಷಿ ಕಪೂರ್ ಸಹೋದರ, ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ರಾಜೀವ್ ಕಪೂರ್ ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಎದೆ ನೋವು ಕಾಣಿಸಿಕೊಳ್ತಿದ್ದಂತೆ ಸಹೋದರ ರಣಧೀರ್ ಕಪೂರ್ ಅವ್ರನ್ನು ಚೆಂಬೂರಿನ ಐಲೆಕ್ಸ್ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಚಿಕಿತ್ಸೆ ನೀಡುವ ಮೊದಲೇ ರಾಜೀವ್ ಕಪೂರ್ ನಿಧನರಾಗಿದ್ದಾರೆ.
ರಾಜೀವ್ ಕಪೂರ್ ನಿಧನದ ಸುದ್ದಿಯನ್ನು ರಣಧೀರ್ ಕಪೂರ್ ಖಚಿತಪಡಿಸಿದ್ದಾರೆ. ರಾಜೀವ್ ಕಪೂರ್, ರಾಮ್ ತೇರಿ ಗಂಗಾ ಮೈಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ರಿಷಿ ಕಪೂರ್ ಪತ್ನಿ ನೀತು ಕಪೂರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ನೋವಿನ ವಿಷ್ಯವನ್ನು ಹಂಚಿಕೊಂಡಿದ್ದಾರೆ.
ರಾಜೀವ್ ಕಪೂರ್ ನಟನೆ ಜೊತೆ ನಿರ್ದೇಶನ, ನಿರ್ಮಾಣ ಕೂಡ ಮಾಡ್ತಿದ್ದರು. ಶಮ್ಮಿ ಕಪೂರ್ ಹಾಗೂ ಶಶಿ ಕಪೂರ್, ರಾಜೀವ್ ಕಪೂರ್ ಚಿಕ್ಕಪ್ಪಂದಿರು. 1983ರಲ್ಲಿ ರಾಜೀವ್ ಕಪೂರ್ ಏಕ್ ಜಾನ್ ಹೇ ಹಮ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿದ್ದರು. ಆಸಮಾನ್, ಲವ್ವರ್ ಬಾಯ್, ಜಬರದಸ್ತ್, ಹಮ್ ತೋ ಚಲೇ ಪರದೇಸಿ ಚಿತ್ರ ರಾಜೀವ್ ಕಪೂರ್ ಗೆ ಹೆಸರು ತಂದ ಚಿತ್ರಗಳು.