ಬಳಕುವ ಸೊಂಟ, ಬೊಜ್ಜಿಲ್ಲದ ಹೊಟ್ಟೆ ನಮ್ಮದಾಗಬೇಕು ಎಂಬ ಆಸೆ ಹೆಣ್ಣುಮಕ್ಕಳಿಗಿರುವುದು ಸಹಜ. ಆದರೆ ಒಂದು ಮಗುವಾದ ಬಳಿಕ ದೇಹ ಸಾಕಷ್ಟು ಬದಲಾವಣೆಯಾಗುತ್ತದೆ. ಮಗುವಿಗೆ ಹಾಲೂಣಿಸಬೇಕಾಗಿರುವುದರಿಂದ ಸಾಧ್ಯವಾದಷ್ಟು ಪ್ರೊಟೀನ್ ಭರಿತವಾದ ಆಹಾರವನ್ನು ತಾಯಂದಿರು ಸೇವಿಸಬೇಕಾಗುತ್ತದೆ. ಡಯೆಟ್, ಯೋಗವೆಂದಲ್ಲಾ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ ದೇಹ ಮೊದಲಿನ ಆಕಾರ ಕಳೆದುಕೊಂಡು ದಪ್ಪಗಾಗುತ್ತದೆ. ಇದನ್ನು ಕರಗಿಸಲು ಸಾಕಷ್ಟು ಹೆಣಗಾಡಬೇಕಾಗುತ್ತದೆ.
ಇನ್ನು ಮಕ್ಕಳು ತಿಂದುಬಿಟ್ಟ ತಿಂಡಿಯನ್ನು ಹಾಳಾಗುತ್ತದೆ ಎಂದು ಕೆಲವು ತಾಯಂದಿರು ತಾವೇ ತಿನ್ನುತ್ತಾರೆ. ಇದರಿಂದ ಕೂಡ ತೂಕ ಏರಿಕೆಯಾಗುತ್ತದೆ.
ಮಗುವಿಗೆ ಎದೆಹಾಲು ಕುಡಿಸುವುದನ್ನು ನಿಲ್ಲಿಸಿದ ಬಳಿಕ ಸಾಧ್ಯವಾದಷ್ಟು ಕಾರ್ಬೋಹೈಡೆಟ್ಸ್ ಕಡಿಮೆ ಇರುವ ಆಹಾರವನ್ನು ಸೇವಿಸಿ. ಜತೆಗೆ ಯೋಗ, ವ್ಯಾಯಾಮ ಮಾಡುವುದಕ್ಕೆ ಸಮಯವಿಲ್ಲವೆಂದವರು ಮಗುವಿನ ಜತೆ ಆಟವಾಡುವುದು, ಅವರ ಹಿಂದೆ ಓಡಾಡುವುದು ಮಾಡಿದರೆ ದೇಹದ ಕೊಬ್ಬು ಸ್ವಲ್ಪ ಕರಗುತ್ತದೆ. ಹಾಗೇ ಮಗುವಿನ ಜತೆ ಆಟವಾಡಿದ ಹಾಗೂ ಆಗುತ್ತದೆ.
ಇನ್ನು ಯಾವುದು ತಿನ್ನಬೇಕು ಯಾವುದು ಬೇಡ ಎಂಬುದರ ಕುರಿತು ದೃಢವಾದ ನಿರ್ಧಾರ ಮಾಡಿಕೊಳ್ಳಿ. ಸಾಧ್ಯವಾದಷ್ಟು ಸಕ್ಕರೆ ಹಾಗೂ ಸಿಹಿ ತಿನಿಸುಗಳಿಂದ ದೂರವಿಡಿ. ತಿನ್ನಬೇಕು ಅನಿಸಿದರೆ ಸ್ವಲ್ಪ ತಿಂದು ಒಂದು ಗ್ಲಾಸ್ ಬಿಸಿ ನೀರು ಕುಡಿದು ಬಿಡಿ. ಚಾಕೊಲೇಟ್ ಸಿಹಿ ಪದಾರ್ಥಗಳ ಬದಲು, ಹಣ್ಣುಗಳ ಸಲಾಡ್, ಡ್ರೈ ಫ್ರೂಟ್ಸ್ ಸೇವಿಸಿದರೆ ಒಳ್ಳೆಯದು.
ಇನ್ನು ತೂಕ ಹೆಚ್ಚಾಯಿತು ಎಂದು ಚಿಂತಿಸುವುದರ ಬದಲು ತಾಯ್ತನವನ್ನು ಆನಂದಿಸಿ. ಮಕ್ಕಳು ತುಸು ದೊಡ್ಡವರಾಗುತ್ತಿದ್ದಂತೆ ಡಯೆಟ್, ವ್ಯಾಯಾಮದ ಮೊರೆ ಹೋಗಿ ಕರಗಿಸಿಕೊಳ್ಳಬಹುದು.