ಉತ್ತರಕಾಶಿ ಹಿಮಪಾತ ದುರಂತದಲ್ಲಿ ಇಬ್ಬರು ಕನ್ನಡಿಗರು ಕೂಡ ಸಾವನ್ನಪ್ಪಿದ್ದಾರೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ.
ಕಳೆದ ಮಂಗಳವಾರ ಸಂಭವಿಸಿದ್ದ ಹಿಮಾಪಾತದಲ್ಲಿ ದುರ್ಘಟನೆ ನಡೆದಿದೆ. ಹಿಮಪಾತದಿಂದಾಗಿ ಇದುವರೆಗೆ 29 ಜನರು ದುರ್ಮರಣಕ್ಕೀಡಾಗಿದ್ದಾರೆ. ಉತ್ತರ ಕಾಶಿ ಹಿಮಪಾತ ದುರಂತದಲ್ಲಿ ಕನ್ನಡಿಗರಾದ ಬೆಂಗಳೂರು ಮೂಲದ ಎಂ. ವಿಕ್ರಂ ಮತ್ತು ಕೆ. ರಕ್ಷಿತ್ ಅವರ ಶವ ಪತ್ತೆಯಾಗಿವೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಮಟ್ಲಿ ಹೆಲಿಪ್ಯಾಡ್ ಮತ್ತು ಹರ್ಷಿಲ್ ಹೆಲಿಪ್ಯಾಡ್ ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ದ್ರೌಪದಿ ಕಾ ದಂಡ-II ಶಿಖರದ ಬಳಿ ಹಿಮಪಾತದ ಸ್ಥಳದಲ್ಲಿ ಸತತ ಆರನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಪರ್ವತಾರೋಹಣ ಪ್ರಶಿಕ್ಷಣಾರ್ಥಿಗಳ 10 ಶವಗಳನ್ನು ಭಾನುವಾರ ಉತ್ತರಕಾಶಿಗೆ ತರಲಾಯಿತು. ಇಲ್ಲಿಯವರೆಗೆ ಒಟ್ಟು 27 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅದರಲ್ಲಿ 21 ಮೃತದೇಹಗಳನ್ನು ಉತ್ತರಕಾಶಿಗೆ ಅವರ ಕುಟುಂಬಗಳಿಗೆ ಹಸ್ತಾಂತರಿಸಲು ತರಲಾಗಿದೆ ಎಂದು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್(ಎನ್‌ಐಎಂ) ತಿಳಿಸಿದೆ.
ಶುಕ್ರವಾರ 4, ಶನಿವಾರ 7 ಮತ್ತು ಭಾನುವಾರ 10 ಶವಗಳನ್ನು ಉತ್ತರಕಾಶಿಗೆ ತರಲಾಗಿದೆ. ಉತ್ತರಕಾಶಿಗೆ ತರಲಾದ ಎಲ್ಲಾ 21 ಮೃತದೇಹಗಳನ್ನು ಗುರುತಿಸಲಾಗಿದ್ದು, ಇದುವರೆಗೆ 11 ಮೃತ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಇಬ್ಬರು ಪರ್ವತಾರೋಹಿಗಳು ಇನ್ನೂ ನಾಪತ್ತೆಯಾಗಿದ್ದಾರೆ.
ಸಂಸ್ಥೆಯಲ್ಲಿ ಮುಂದುವರಿದ ತರಬೇತಿ ಕೋರ್ಸ್‌ನ ಭಾಗವಾಗಿದ್ದ 27 ಪ್ರಶಿಕ್ಷಣಾರ್ಥಿಗಳು ಮತ್ತು ಇಬ್ಬರು ಬೋಧಕರು ಸೇರಿದಂತೆ 29 ಪರ್ವತಾರೋಹಿಗಳ ಗುಂಪು ಅಕ್ಟೋಬರ್ 4 ರಂದು ಅವರು ಶಿಖರದಿಂದ ಹಿಂತಿರುಗುತ್ತಿದ್ದಾಗ 17,000 ಅಡಿ ಎತ್ತರದಲ್ಲಿ ಹಿಮಪಾತ ಸಂಭವಿಸಿದಾಗ ನಾಪತ್ತೆಯಾಗಿದ್ದರು.