ನವದೆಹಲಿ: ಪ್ರಸಕ್ತ ವರ್ಷದಲ್ಲಿ 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವಂತೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಸುಪ್ರೀಂಕೋರ್ಟ್ ಗೆ ರಾಜ್ಯ ಸರ್ಕಾರ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಮಾ. 6 ರಂದು ನೀಡಿದ ಆದೇಶ ರದ್ದುಗೊಳಿಸಿ, 2023 -24ನೇ ಶೈಕ್ಷಣಿಕ ವರ್ಷಕ್ಕೆ 5, 8, 9 ಮತ್ತು 11ನೇ ತರಗತಿ ಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ್ದು, ಇದರ ವಿರುದ್ಧ ಅನುದಾನರಹಿತ ನೋಂದಾಯಿತ ಶಾಲೆಗಳ ಒಕ್ಕೂಟ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿವೆ.
ಮಂಗಳವಾರ ನಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ, ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ರಾಜ್ಯ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ಕಾರದ ಅಧಿಸೂಚನೆಯನ್ನು ಹಿಂಪಡೆಯಲಾಗಿದ್ದು, ಪರೀಕ್ಷೆ ನಡೆಸಿದರೂ ಫಲಿತಾಂಶ ಪ್ರಕಟಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಈ ವೇಳೆ ಪೋಷಕರು ಮತ್ತು ಮಕ್ಕಳಿಗೆ ತೊಂದರೆ ನೀಡಲು ರಾಜ್ಯ ಸರ್ಕಾರ ಏಕೆ ಮುಂದಾಗಿದೆ ಎಂದು ಪೀಠ ಪ್ರಶ್ನಿಸಿದೆ. ಆಗ ಮೆಹ್ತಾ ಅವರು ಕೆಲ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಪಡೆದ ಸರಾಸರಿ ಅಂಕಗಳು 50 ಕ್ಕಿಂತ ಕಡಿಮೆ ಇರುವುದರಿಂದ ಪರೀಕ್ಷೆ ನಡೆಸಲಾಗಿತ್ತು ಎಂದು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ್ದಾರೆ. ವಾದ ಆಲಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.