ಬೆಂಗಳೂರು: ಸರ್ಕಾರ ಮತ್ತು ಖಾಸಗಿ ಶಾಲಾ ಸಂಘಟನೆಗಳ ಕಾನೂನು ಹೋರಾಟದ ನಡುವೆ ಇಂದಿನಿಂದ ರಾಜ್ಯದ 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಆರಂಭವಾಗಲಿವೆ.
ಸರ್ಕಾರ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಗೆ ಆಯಾ ಶಾಲೆಗಳಲ್ಲಿಯೇ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ ಒಟ್ಟು 69,137 ಶಾಲೆಗಳಿಂದ 28.14 ಲಕ್ಷ ವಿದ್ಯಾರ್ಥಿಗಳಿಗೆ ಮಾರ್ಚ್ 18ರವರೆಗೆ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.
ಐದನೇ ತರಗತಿ ಪರೀಕ್ಷೆಗಳು ಮಾರ್ಚ್ 11 ರಿಂದ 14ರ ವರೆಗೆ ನಡೆಯಲಿದೆ. 8, 9ನೇ ತರಗತಿ ಪರೀಕ್ಷೆಗಳು ಮಾರ್ಚ್ 11 ರಿಂದ 18ರವರೆಗೆ ನಡೆಯಲಿದೆ.
ಎಲ್ಲಾ ಮಕ್ಕಳಿಗೂ ಮಧ್ಯಾಹ್ನ 2:30 ರಿಂದ ಪರೀಕ್ಷೆ ಆರಂಭವಾಗಲಿದ್ದು, ಸಂಜೆ 4:30ರ ವರೆಗೆ, 5 ಗಂಟೆ, 5:15 ರವರೆಗೆ ಪರೀಕ್ಷೆಗಳು ನಡೆಯಲಿವೆ. ಐದನೇ ತರಗತಿಗೆ ಪ್ರಥಮ ಭಾಷೆ, ದ್ವಿತೀಯ ಭಾಷೆ, ಗಣಿತ, ಪರಿಸರ ಅಧ್ಯಯನ ಸೇರಿ ನಾಲ್ಕು ವಿಷಯಗಳಿವೆ. 8 ಮತ್ತು 9ನೇ ತರಗತಿಗೆ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗಳು ನಡೆಯಲಿದೆ.