ಬೆಂಗಳೂರು: 5 ಮತ್ತು 8ನೇ ತರಗತಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ ನಡೆಸಲು ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಕಳೆದ ಶೈಕ್ಷಣಿಕ ಸಾಲಿನ ಕೊನೆಯ ಅವಧಿಯಲ್ಲಿ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದ್ದ ಶಿಕ್ಷಣ ಇಲಾಖೆ ನಂತರ ಮೌಲ್ಯಾಂಕನ ನಡೆಸಲು ಮುಂದಾಗಿ ಗೊಂದಲ ಮೂಡಿಸಿತ್ತು. ಈ ಬಾರಿ 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಲ್ಲಿಯೇ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ ನಡೆಸಲಾಗುತ್ತದೆ. 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಕೊಡಲಾಗುವುದು. ಈ ಪ್ರಶ್ನೆ ಪತ್ರಿಕೆ ಆಧರಿಸಿ ಶಾಲೆಗಳು ಮಕ್ಕಳಿಗೆ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.