ಬೆಂಗಳೂರು: ಮಾರ್ಚ್ 13 ರಿಂದ ಆರಂಭವಾಗಬೇಕಿದ್ದ 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ತಡೆಹಿಡಿಯುವಂತೆ ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 14ಕ್ಕೆ ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಐದು ಮತ್ತು ಎಂಟನೇ ತರಗತಿಗಳ ಪರೀಕ್ಷೆಯನ್ನು ಮುಂದೂಡಿದೆ.
ಹೈಕೋರ್ಟ್ ಆದೇಶದಂತೆ ಪರೀಕ್ಷೆ ಮುಂದೂಡಿದ್ದು, ಅನುಮತಿ ನೀಡಿದರೆ ಮೌಲ್ಯಾಂಕನ ಪರೀಕ್ಷೆ ನಡೆಸುವ ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಲಾಗಿದೆ. ಬೋರ್ಡ್ ಪರೀಕ್ಷೆ ನಡೆಸುವ ಕುರಿತಾಗಿ ಹೊರಡಿಸಿದ್ದ ಸುತ್ತೋಲೆಗಳನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಶುಕ್ರವಾರ ರದ್ದುಗೊಳಿಸಿದೆ. ಸರ್ಕಾರ ವಿಭಾಗೀಯ ಪೀಠಕ್ಕೆ ಶನಿವಾರ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ವಿಚಾರಣೆ ನಡೆಸಿ ಸುದೀರ್ಘವಾದ ಪ್ರತಿವಾದ ಆಲಿಸಿದ ನಂತರ ಮಾರ್ಚ್ 13 ರಿಂದ ನಿಗದಿಯಾದ ಪರೀಕ್ಷೆಗಳನ್ನು ಸದ್ಯಕ್ಕೆ ಮುಂದೂಡಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕೆಂಬ ಸರ್ಕಾರದ ಮಧ್ಯಂತರ ಮನವಿ ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿದೆ.