ಬೆಂಗಳೂರು: 5, 8, ಮತ್ತು 9ನೇ ತರಗತಿ ಮಕ್ಕಳು, ಪೋಷಕರಲ್ಲಿ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ಕುರಿತಾಗಿ ಗೊಂದಲ ಮುಂದುವರೆದಿದೆ.
ಮೌಲ್ಯಾಂಕನ ಪರೀಕ್ಷೆ ನಡೆಯುತ್ತದೆಯೇ, ಇಲ್ಲವೇ ಎನ್ನುವ ಗೊಂದಲದಲ್ಲೇ ಕಾಲ ಕಳೆಯುವಂತಾಗಿದೆ. ಮೌಲ್ಯಾಂಕನ ಪರೀಕ್ಷೆ ಕುರಿತಾಗಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ಮುಂದೇನು ಎನ್ನುವ ಪ್ರಶ್ನೆ ಎದುರಾಗಿದೆ. ಪರೀಕ್ಷೆ ಮುಂದುವರೆಯುತ್ತದೆಯೇ ಅಥವಾ ರದ್ದಾಗುತ್ತದೆಯೇ ಎಂಬುದರ ಬಗ್ಗೆ ಖಚಿತತೆ ಇಲ್ಲವಾಗಿದೆ.
ಈಗಾಗಲೇ ಶಾಲಾ ಹಂತದ ಪರೀಕ್ಷೆಗಳು ಪೂರ್ಣಗೊಂಡಿದ್ದು, ಮಕ್ಕಳು ಆಟ, ಪ್ರವಾಸ, ಬೇಸಿಗೆ ಶಿಬಿರದಲ್ಲಿ ಭಾಗವಹಿಸಬೇಕಿತ್ತಾದರೂ ಮೌಲ್ಯಾಂಕನ ಪರೀಕ್ಷೆಗಾಗಿ ಕಾಯುವಂತಾಗಿದೆ. ಶಾಲಾ ಶಿಕ್ಷಣ ಇಲಾಖೆ ರಾಜ್ಯದ ಇದು 8 ಮತ್ತು 9ನೇ ತರಗತಿ ಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿತ್ತು. ಮಾರ್ಚ್ 11 ರಿಂದ ಎರಡು ವಿಷಯದ ಪರೀಕ್ಷೆಗಳು ನಡೆದ ನಂತರ ಸುಪ್ರೀಂಕೋರ್ಟ್ ಪರೀಕ್ಷೆಗೆ ತಡೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ. ಶೀಘ್ರವೇ ತೀರ್ಪು ಪ್ರಕಟವಾಗಲಿದ್ದು, ಅಲ್ಲಿವರೆಗೂ ಮಕ್ಕಳು, ಪೋಷಕರು ಕಾಯುವಂತಾಗಿದೆ.