ಬೆಂಗಳೂರು: ನಿಗಮ -ಮಂಡಳಿ ನೇಮಕಾತಿ ವಿಚಾರದಲ್ಲಿ ಹಿರಿಯರ ಅಭಿಪ್ರಾಯ ಪಡೆಯದಿರುವ ಬಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡ ದನಿಗೂಡಿಸಿದ್ದಾರೆ.
ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೇ ನಿಗಮ ಮಂಡಳಿ ಅಧ್ಯಕ್ಷರ ನಾಮನಿರ್ದೇಶನ ಪಟ್ಟಿ ಸಿದ್ಧಪಡಿಸಿದ್ದು, ಹಿರಿಯರನ್ನು ಪರಿಗಣಿಸದಿರುವ ಬಗ್ಗೆ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಮೊದಲ ಸಲ ಗೆದ್ದಿರುವ ಶಾಸಕರಿಗೆ ನಿಗಮ -ಮಂಡಳಿ ನೇಮಕಾತಿಗೆ ಅವಕಾಶ ಇಲ್ಲ. ಮೂರು ನಾಲ್ಕು ಸಲ ಗೆದ್ದವರಿಗೆ ಅವಕಾಶ ಕೊಡಲಾಗುತ್ತದೆ. ಹಿರಿಯ ಶಾಸಕರಿಗೆ ಅವಕಾಶ ನೀಡುವುದರಿಂದ ಭಿನ್ನಮತ, ಅತೃಪ್ತಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ನಿಗಮ ಮಂಡಳಿ ನಾಮನಿರ್ದೇಶನ ಒಪ್ಪಲು ಹಿರಿಯ ಶಾಸಕರು ಸಿದ್ಧವಿಲ್ಲ, ಕಿರಿಯ ಶಾಸಕರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಅಸಮಾಧಾನ ಇದೆ. ಪಟ್ಟಿ ಸಿದ್ಧಪಡಿಸಲು ಹಿರಿಯ ನಾಯಕರ ಅಭಿಪ್ರಾಯ ಪಡೆದಿಲ್ಲ ಎಂಬುದು ಪರಮೇಶ್ವರ್ ಅಭಿಪ್ರಾಯವಾಗಿದೆ.