
ಬೆಂಗಳೂರು: ನಿಗಮ -ಮಂಡಳಿ ಅಧ್ಯಕ್ಷರು, ಸದಸ್ಯರ ನೇಮಕಾತಿ ಸಂಬಂಧ ಮೊದಲ ಪಟ್ಟಿ ಸಿದ್ಧಪಡಿಸಲಾಗಿದೆ. ಅಧಿವೇಶನಕ್ಕೆ ಮೊದಲು 25 ವಿಧಾನಸಭೆ ಸದಸ್ಯರು, ನಾಲ್ವರು ವಿಧಾನಪರಿಷತ್ ಸದಸ್ಯರು ನಿಗಮ -ಮಂಡಳಿಗಳ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ.
ಮೊದಲ ಹಂತದಲ್ಲಿ ಶಾಸಕರಿಗೆ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ನೀಡಲಿದ್ದು, ಎರಡು ಮತ್ತು ಮೂರನೇ ಹಂತದಲ್ಲಿ ಮುಖಂಡರು, ಕಾರ್ಯಕರ್ತರ ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಒಳಗೊಂಡ ಸಭೆಯಲ್ಲಿ ಮೊದಲ ಹಂತದಲ್ಲಿ ನಿಗಮ -ಮಂಡಳಿ ನೇಮಕಾತಿಗೆ ಶಾಸಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ವರಿಷ್ಠರಿಗೆ ಪಟ್ಟಿ ಕಳುಹಿಸಿ ಅನುಮೋದನೆ ಬಳಿಕ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಪರಮೇಶ್ವರ್ ಅಸಮಾಧಾನ:
ನಿಗಮ -ಮಂಡಳಿ ನೇಮಕಾತಿ ಬಗ್ಗೆ ನನ್ನೊಂದಿಗೆ ಯಾರೂ ಚರ್ಚಿಸಿಲ್ಲ, ಅಭಿಪ್ರಾಯವನ್ನೂ ಕೇಳಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಣದೀಪ್ ಸಿಂಗ್ ಸುರ್ಜೇವಾಲ ಅಧ್ಯಕ್ಷತೆಯ ಸಭೆಯಲ್ಲಿ ನಿಗಮ -ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಫೈನಲ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ, ಅಭಿಪ್ರಾಯ ಕೇಳಿಲ್ಲ. ಕೇಳಿದ್ದರೆ ಒಳ್ಳೆಯದಿತ್ತು. ನಾನು ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಶಾಸಕರೊಂದಿಗೆ ಕಾರ್ಯಕರ್ತರಿಗೂ ಅಧಿಕಾರ ಹಂಚಿಕೆ ಮಾಡಿದರೆ ಒಳ್ಳೆಯದು. ಇದರಿಂದ ಪಕ್ಷ ಸಂಘಟನೆಗೂ ಅನುಕೂಲವಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ನೇಮಕಾತಿ ಬಗ್ಗೆ ಯಾರ ಅಭಿಪ್ರಾಯವನ್ನು ಪಡೆಯಲಾಗಿಲ್ಲ. ಆಯ್ಕೆ ಪ್ರಕ್ರಿಯೆ ಪ್ರಾಥಮಿಕ ಹಂತದಲ್ಲಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲವೆಂದು ಹೇಳಿದ್ದಾರೆ.