ಬೆಂಗಳೂರು: ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ನಿಗಮ-ಮಂಡಳಿಗಳ ಮೇಜರ್ ಸರ್ಜರಿಗೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಒಂದೂವರೆ ವರ್ಷ ಅಧಿಕಾರ ಅನುಭವಿಸಿದ ಶೇಕಡ 40 ರಷ್ಟು ಮಂದಿಗೆ ಕೊಕ್ ನೀಡಲು ಚಿಂತನೆ ನಡೆಸಿದ್ದು, ಉಳಿದ ಅವಧಿಗೆ ಹೊಸಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ಕಲ್ಪಿಸಿದ್ದಾರೆ. ಅವರಲ್ಲಿ ಶೇಕಡ 40 ರಷ್ಟು ಮಂದಿಯನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶಾಸಕರನ್ನು ಹೊರತುಪಡಿಸಿ ಪಕ್ಷದ ಮುಖಂಡರಿಗೆ ಅವಕಾಶ ನೀಡಲಾಗುವುದು. ಅಧಿಕಾರ ವಂಚಿತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆ ದೃಷ್ಠಿಯಿಂದ ನಿಗಮ -ಮಂಡಳಿಗಳಲ್ಲಿ ಹೆಚ್ಚಿನ ಸ್ಥಾನ ನೀಡಬೇಕೆಂಬ ಒತ್ತಡ ಪಕ್ಷದ ನಾಯಕರ ಮೇಲಿದೆ. ಈ ಹಿನ್ನೆಲೆಯಲ್ಲಿ ನಿಗಮ-ಮಂಡಳಿಗಳಿಗೆ ಮೇಜರ್ ಸರ್ಜರಿ ಮಾಡಬಹುದು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ನಿಗಮ-ಮಂಡಳಿಯಲ್ಲಿ ಬದಲಾವಣೆ ಮಾಡಲಾಗುವುದು ಎನ್ನಲಾಗಿದೆ.