ಬೆಂಗಳೂರು: ಬಿಎಂಟಿಸಿ ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡೀಸೆಲ್ ದರ ಬಾರಿ ಏರಿಕೆಯಾದ ಕಾರಣ ನಿಗಮಕ್ಕೆ ನಷ್ಟವಾಗುತ್ತಿದ್ದು, ಶೇಕಡ 20 ರಷ್ಟು ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅನ್ಲಾಕ್ ನಂತರ ಬಿಎಂಟಿಸಿ ಬಸ್ ಗಳ ಸಂಚಾರ ಪ್ರಾರಂಭವಾಗಿದ್ದು, ಯಥಾಸ್ಥಿತಿಗೆ ಮರಳಿದೆ. ಕಳೆದ ಎರಡು ತಿಂಗಳಿಂದ ಬಸ್ ಸಂಚಾರ ಸ್ಥಗಿತವಾಗಿತ್ತು. ಇಂಧನ ದರ ಕೂಡ ಭಾರಿ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 15 ರೂ.ನಷ್ಟು ಡೀಸೆಲ್ ದರ ಏರಿಕೆಯಾಗಿದ್ದು, ಸಂಸ್ಥೆಗೆ ಹೆಚ್ಚಿನ ನಷ್ಟವಾಗುತ್ತಿದೆ. ಹೀಗಾಗಿ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಹೇಳಿದ್ದಾರೆ.
ಶೇಕಡ 20 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಕಳೆದ ಜನವರಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದರೆ, ಅದು ಜಾರಿಯಾಗಿಲ್ಲ. ಈಗ ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರಲಾಗುವುದು ಎನ್ನಲಾಗಿದೆ.