ಬೆಂಗಳೂರು: ಬಿಎಂಟಿಸಿ ಎಂಡಿ ಹಾಗೂ ಕೆ.ಎಸ್.ಆರ್.ಟಿ.ಸಿ ನೌಕರರು, ಸಿಬ್ಬಂದಿಗಳ ನಡುವೆ ಜಟಾಪಟಿ ಆರಂಭವಾಗಿದ್ದು, ಬಿಎಂಟಿಸಿ ಎಂಡಿ ಸತ್ಯವತಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಬಿಎಂಟಿಸಿ ಎಂಡಿ ಸತ್ಯವತಿ ಆಡಳಿತ ವೈಖರಿ ವಿರುದ್ಧ ಕಿಡಿ ಕಾರಿರುವ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ನೌಕರ ಸಂಘಟನೆ ಅಧ್ಯಕ್ಷ ಅನಂತಸುಬ್ಬರಾವ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ನೌಕರರ ಸಮಸ್ಯೆಗಳಿಗೆ ಎಂಡಿ ಸತ್ಯವತಿ ಸ್ಪಂದಿಸುತ್ತಿಲ್ಲ. ಎಂಡಿಯಾಗಿ ಬಂದಾಗಿನಿಂದ ಬಿಎಂಟಿಸಿಯಲ್ಲಿ ತಮ್ಮದೇ ದರ್ಬಾರ್ ನಡೆಸಿದ್ದಾರೆ. ಅಧಿಕಾರ ವರ್ಗದವರನ್ನು ಬಿಟ್ಟು ಬೇರೆ ಸಿಬ್ಬಂದಿಗಳನ್ನು ಕಚೇರಿಗೆ ಸೇರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಡಿಪೋ ಮ್ಯಾನೇಜರ್, ಇತರೆ ಅಧಿಕಾರಿಗಳನ್ನು ನಿಂದಿಸಿದ್ದಾರೆ. ಕಾರ್ಮಿಕ ಸಂಘಟನೆಗಳ ಜೊತೆ ನೌಕರರ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಚರ್ಚಿಸಿಲ್ಲ. ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿದ್ದಕ್ಕೆ ಟ್ರೇಡ್ ಯುನಿಯನ್ ಕಾರ್ಯಕರ್ತರನ್ನು ಅಮಾನತು ಮಾಡಿದ್ದಾರೆ. ಬಿಎಂಟಿಸಿಯಲ್ಲಿ ಕೈಗಾರಿಕಾ ಬಾಂಧವ್ಯವನ್ನೇ ನಾಶ ಮಾಡಿದ್ದಾರೆ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ.