
ಬೆಳಗಾವಿ: ಪ್ರಯಾಣದರ ಹೆಚ್ಚಳ ಮಾಡಿದ ಕಾರಣ ಬಿಎಂಟಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. 650 ಕೋಟಿ ರೂಪಾಯಿ ಆದಾಯ ಖೋತಾ ಆಗಿದೆ ಎಂದು 2024ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
2014 ರಿಂದ ಪ್ರಯಾಣ ದರ ಪರಿಷ್ಕರಿಸದ ಕಾರಣ 649.74 ಕೋಟಿ ರೂ. ಸಂಭಾವ್ಯ ಸಂಚಾರ ಆದಾಯವನ್ನು ಬಿಎಂಟಿಸಿ ಕಳೆದುಕೊಂಡಿದೆ
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯಲ್ಲಿ ಬಿಎಂಟಿಸಿ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನಾ ವರದಿ ಮಂಡಿಸಲಾಗಿದೆ.
ವರದಿಯಲ್ಲಿ ಬಿಎಂಟಿಸಿ ಆರ್ಥಿಕ ನಿರ್ವಹಣೆಯಲ್ಲಿನ ಸಮಸ್ಯೆಗಳ ಬಗ್ಗೆ ಹಲವು ಅಂಶಗಳನ್ನು ಬಹಿರಂಗಪಡಿಸಲಾಗಿದೆ. ನಿಗಮದ ಬಸ್ ಗಳ ಪ್ರತಿ ಕಿಲೋ ಮೀಟರ್ ಗಳಿಕೆಯು ವೆಚ್ಚಕ್ಕಿಂತ ಕಡಿಮೆ ಇದೆ. 2017ರಲ್ಲಿ ಶೇಕಡ 133.59ರಷ್ಟು ಇದ್ದ ನಿರ್ವಹಣಾ ವೆಚ್ಚದ ಅನುಪಾತ 2021-22ಕ್ಕೆ ಶೇ. 22.62ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಸಿಬ್ಬಂದಿ ವೆಚ್ಚ ಶೇಕಡ 60, ಇಂಧನ ವೆಚ್ಚ ಶೇಕಡ 27ರಷ್ಟು ಆಗಿದೆ.
ಪ್ರಯಾಣದರ ಪರಿಷ್ಕರಣೆ ಮಾಡದ ಕಾರಣ 649.74 ಕೋಟಿ ರೂ ಸಂಭಾವ್ಯ ಸಂಚಾರ ಆದಾಯ ಕಡಿಮೆಯಾಗಿದೆ. ಜೊತೆಗೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸೇರಿ ಇನ್ನಿತರ ಪ್ರಯಾಣಿಕರಿಗೆ ರಿಯಾಯಿತಿ ಪಾಸ್ ಗೆ ಸರ್ಕಾರ ಅನುದಾನ ನೀಡುತ್ತಿರುವ ಕಾರಣದಿಂದ ಸರ್ಕಾರವು ಬಿಎಂಟಿಸಿಗೆ ನೆರವು ನೀಡಲು ಸಾಧ್ಯವಾಗಿಲ್ಲ. ಇದೆಲ್ಲವೂ ಬಿಎಂಟಿಸಿ ಆರ್ಥಿಕವಾಗಿ ಕುಸಿಯಲು ಕಾರಣವಾಗಿದೆ. ಇದನ್ನು ಸರಿಪಡಿಸಲು ಸರ್ಕಾರ ಕಾಲಕಾಲಕ್ಕೆ ಬಜೆಟ್ ಬೆಂಬಲ ನೀಡಬೇಕು. ರಿಯಾಯಿತಿ ಬಸ್ ಪಾಸ್ ಯೋಜನೆಗಳಲ್ಲಿ ಸರ್ಕಾರದ ಪಾಲು ಮರುಪಾವತಿಸಬೇಕು. ಬಸ್ ಗಳ ಸಮರ್ಪಕ ನಿರ್ವಹಣೆ ಮಾಡದ ಕಾರಣ ಕಾರ್ಯಕ್ಷಮತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಹೇಳಲಾಗಿದೆ.