
ಧಾರವಾಡ: ಭಾನುವಾರ ನಡೆದ ಬಿಎಂಟಿಸಿ ನಿರ್ವಾಹಕರ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ ಅಭ್ಯರ್ಥಿಯೊಬ್ಬ ಸಿಕ್ಕಿ ಬಿದ್ದ ಘಟನೆ ಧಾರವಾಡದ ಬಾಸೆಲ್ ಮಿಷನ್ ಪಿಯು ಕಾಲೇಜಿನಲ್ಲಿ ನಡೆದಿದೆ.
ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಭಾನುವಾರ ಎರಡು ಪರೀಕ್ಷೆಗಳು ನಿಗದಿಯಾಗಿದ್ದು, ಬೆಳಗಿನ ಅವಧಿಯ ಸಾಮಾನ್ಯ ಜ್ಞಾನ ಪರೀಕ್ಷೆಯ ವೇಳೆ ಅಭ್ಯರ್ಥಿ ಕಾಪಿ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದಾನೆ. ಕೆಲವು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಕಾಪಿ ನಡೆಸಲಾಗಿದೆ ಎಂದು ಆರೋಪಿಸಿದ್ದು, ಕಾಪಿ ಚೀಟಿಯನ್ನು ಕೇಂದ್ರದ ಸಿಬ್ಬಂದಿಗೆ ನೀಡಿದ್ದಾರೆ.
ಇದರಿಂದಾಗಿ ಕೇಂದ್ರದಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು. ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶಹರ ಠಾಣೆ ಪೊಲೀಸರು ಒಬ್ಬ ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತಾಗಿ ಕೆಇಎ ಗೆ ವರದಿ ಸಲ್ಲಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.