ಬೆಂಗಳೂರು: ಬಿಎಂಟಿಸಿ ಸಾರಿಗೆ ನಿಗಮದಲ್ಲಿ ವಸ್ತ್ರಸಂಹಿತೆ ಉಲ್ಲಂಘನೆಯ ಆರೋಪ ಕೇಳಿಬಂದಿವೆ. ಮುಸ್ಲಿಂ ನೌಕರರು ಟೋಪಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದು, ಹಿಂದೂ ನೌಕರರು ಕೇಸರಿ ಶಾಲು ಧರಿಸಿಕೊಂಡು ಕೆಲಸಕ್ಕೆ ಆಗಮಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈ ರೀತಿ ಟೋಪಿ, ಕೇಸರಿ ಶಾಲು ಧರಿಸಿಕೊಂಡು ಕೆಲವರು ಕೆಲಸಕ್ಕೆ ಹಾಜರಾಗುತ್ತಿದ್ದು, ಟೋಪಿ ಧರಿಸಿ ಬಂದರೆ ಕೇಸರಿ ಶಾಲು ಹಾಕುತ್ತೇವೆ ಎಂದು ಕೇಸರಿ ಕಾರ್ಮಿಕರ ಸಂಘದ ಸದಸ್ಯರು ಹೇಳಿಕೊಂಡಿದ್ದಾರೆ. ಸುಮಾರು 1500 ಮಂದಿ ಕೇಸರಿ ಕಾರ್ಮಿಕರ ಸಂಘದ ಸದಸ್ಯತ್ವ ಹೊಂದಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಾಲೇಜ್ ಗಳಲ್ಲಿ ಕೇಸರಿ ಶಾಲು, ಹಿಜಾಬ್ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿ ಸರ್ಕಾರ ಸಮವಸ್ತ್ರ ನಿಯಮ ಪಾಲಿಸುವಂತೆ ಸೂಚನೆ ನೀಡಿದೆ. ಇದೇ ಸಂದರ್ಭದಲ್ಲಿ ಸರ್ಕಾರಿ ನಿಗಮದಲ್ಲಿ ನೌಕರರು ಟೋಪಿ, ಕೇಸರಿ ಶಾಲು ಧರಿಸಿ ಕೆಲಸಕ್ಕೆ ಹಾಜರಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.