
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದ್ದು, ಧಾರಾಕಾರ ಮಳೆ ನಡುವೆ ಬೆಂಕಿ ತಗುಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸುಟ್ಟು ಕರಕಲಾಗಿದೆ.
ಮಾನ್ಯತಾ ಟೆಕ್ ಪಾರ್ಕ್ ಸಮೀಪ ನಾಗವಾರ -ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಇದೇ ಮಾರ್ಗವಾಗಿ ತೆರಳುತ್ತಿದ್ದ ಬಿಎಂಟಿಸಿ ಬಸ್ ಗೆ ನಡುರಸ್ತೆಯಲ್ಲಿಯೇ ಬೆಂಕಿ ತಗುಲಿ ಹೊತ್ತಿ ಉರಿದಿದೆ ಎಲೆಕ್ಟ್ರಿಕ್ ಬಸ್ ನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದು, ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ. ಬಳಿಕ ಬೆಂಕಿ ಜ್ವಾಲೆ ವ್ಯಾಪಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗೆ ಬಸ್ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.