ಬೆಂಗಳೂರು: ಬಿಎಂಟಿಸಿಯ 320 ಹೊಸ ಎಸಿ ಎಲೆಕ್ಟ್ರಿಕ್ ಬಸ್ ಗಳು ಜನವರಿಯಿಂದ ಸಂಚಾರ ಆರಂಭಿಸಲಿದೆ. 320 ಎಸಿ ಎಲೆಕ್ಟ್ರಿಕ್ ಬಸ್ ಗಳಿಗೆ ಟೆಂಡರ್ ಕರೆಯಲಾಗಿದ್ದು, ಈ ಟೆಂಡರ್ ಅನ್ನು ಅಶೋಕ ಲೇಲ್ಯಾಂಡ್ ಕಂಪನಿಯ ಪಾಲುದಾರ ಸಂಸ್ಥೆ ಓಂ ಕಂಪನಿ ಪಡೆದುಕೊಂಡಿದೆ. ಈಗಾಗಲೇ ವರ್ಕ್ ಆರ್ಡರ್ ಕೂಡ ನೀಡಲಾಗಿದೆ.
12 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 320 ಬಸ್ ಗಳನ್ನು ತೆಗೆದುಕೊಳ್ಳಲಾಗುವುದು. ಎಲೆಕ್ಟ್ರಿಕ್ ಬಸ್ ಗಳಿಗೆ ಚಾಲಕರನ್ನು ಅಶೋಕ ಲೇಲ್ಯಾಂಡ್ ಕಂಪನಿ ನೇಮಕ ಮಾಡಲಿದೆ. ನಿರ್ವಾಹಕರನ್ನು ಸರ್ಕಾರ ನೇಮಕ ಮಾಡಲಿದ್ದು, ಡಿಸೆಂಬರ್ 15ರ ನಂತರ ಟ್ರಯಲ್ ರನ್ ಗಾಗಿ ಬೆಂಗಳೂರಿಗೆ ಬಸ್ ಗಳು ಬರಲಿವೆ.
ಹೊಸ ಎಲೆಕ್ಟ್ರಿಕ್ ಬಸ್ ಗಳು ಮೆಜೆಸ್ಟಿಕ್ ನಿಂದ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಮಾಡಲಿವೆ. ಸದ್ಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಬಿಎಂಟಿಸಿ ವೋಲ್ವೋ ಬಸ್ ಗಳು ಸಂಚರಿಸುತ್ತಿದ್ದು, ಈಗಿರುವ ಎಲ್ಲಾ ವೋಲ್ವೋ ಬಸ್ ಗಳು ನಗರದ ಬೇರೆ ಮಾರ್ಗದಲ್ಲಿ ಸಂಚರಿಸಲಿವೆ. ಈಗಾಗಲೇ ಬಿಎಂಟಿಸಿಯಲ್ಲಿ 1 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್ ಗಳ ಸಂಚಾರವಿದೆ. ಈ ಹೊಸ 320 ಎಸಿ ಎಲೆಕ್ಟ್ರಿಕ್ ಬಸ್ ಗಳ ಸೇರ್ಪಡೆಯಿಂದ ಒಟ್ಟು ಎಲೆಕ್ಟ್ರಿಕ್ ಬಸ್ ಗಳ ಸಂಖ್ಯೆ 1320ಕ್ಕೆ ಏರಿಕೆಯಾಗಲಿದೆ.