ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳ ಚಾಲಕ ಹುದ್ದೆಗೆ ಕೇರಳದ ಯುವಕರ ನೇಮಕ ಮಾಡಲಾಗಿದ್ದ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ, 50 ಚಾಲಕರನ್ನು ವಜಾಗೊಳಿಸಿದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳಲ್ಲಿ ಕನ್ನಡ ಬಾರದ ಕೇರಳದ ಮಲಯಾಳಿ ಯುವಕರನ್ನು, ಅನುಭವ ಇಲ್ಲದ ಯುವಕರಿಗೆ ಚಾಲಕ ಹುದ್ದೆ ನೀಡಲಾಗಿತ್ತು. ಖಾಸಗಿ ಏಜೆನ್ಸಿಯ ಈ ಕ್ರಮದ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ವಿಪಕ್ಷಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜಧಾನಿ ಬೆಂಗಳೂರಿನ ಸಂಚಾರಿ ಜೀವನಾಡಿಯಾಗಿರುವ ಬಿಎಂಟಿಸಿ ಬಸ್ ನಲ್ಲಿ ಕನ್ನಡಿಗರಿಗೆ ಚಾಲಕ ಹುದ್ದೆ ನೀಡುವಂತೆ ಒತ್ತಾಯಗಳು ಕೇಳಿಬಂದಿದ್ದವು.
ಈ ಬೆಳವಣಿಗೆ ಬೆನ್ನಲ್ಲೇ ಬಿಎಂಟಿಸಿ ಅಧಿಕಾರಿಗಳು 50 ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಗೇಟ್ ಪಾಸ್ ನೀಡಿದ್ದಾರೆ. 20ಕ್ಕೂ ಹೆಚ್ಚು ಕೇರಳ ಚಾಲಕರು, 30ಕ್ಕೂ ಹೆಚ್ಚು ಅನುಭವ ಇಲ್ಲದ, ಹೆವಿ ಡ್ರೈವಿಂಗ್ ಲೈಸನ್ಸ್ ಹೊಂದಿರದ ಚಾಲಕರನ್ನು ಪತ್ತೆ ಮಾಡಿ ಹುದ್ದೆಯಿಂದ ತೆಗೆದು ಹಾಕಲಾಗಿದೆ.