ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಉಚಿತ ಟಿಕೆಟ್ ಪಡೆಯಲು ಗುರುತಿನ ಚೀಟಿ ತೋರಿಸುವ ವಿಚಾರವಾಗಿ ಜಗಳ ನಡೆದು ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ ಉಗುರುಗಳಿಂದ ಮುಖ ಪರಚಿ ಗಾಯಗೊಳಿಸಿದ್ದ ಯುವತಿಯನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಿಕ್ಕಬಾಣವರ ನಿವಾಸಿ ಮೋನಿಷಾ(29) ಜೈಲು ಸೇರಿದ ಯುವತಿ. ಭಾನುವಾರ ಬೆಳಿಗ್ಗೆ ಬಿಎಂಟಿಸಿ ಘಟಕ 46 ಬಸ್ ನಿರ್ವಾಹಕಿ ಸುಕನ್ಯಾ(49) ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿ ಗಾಯಗೊಳಿಸಿದ್ದರು. ನಿರ್ವಾಹಕಿ ಸುಕನ್ಯಾ ಅವರು ದೂರು ನೀಡಿದ್ದು, ಬಾಗಲಗುಂಟೆ ಠಾಣೆ ಪೊಲೀಸರು ಆರೋಪಿ ಮೋನಿಷಾರನ್ನು ಬಂಧಿಸಿದ್ದರು. ಸಂಕ್ರಾಂತಿ ಹಬ್ಬದ ರಜೆ ಹಿನ್ನೆಲೆಯಲ್ಲಿ 31ನೇ ಎಸಿಎಂಎಂ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.