ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ವಿದ್ಯಾರ್ಥಿನಿಗೆ ಕಂಡಕ್ಟರ್ ಹಾಗೂ ಇನ್ನಿಬ್ಬರು ಪುರುಷ ಪ್ರಯಾಣಿಕರು ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ದೊಮ್ಮಲೂರಿನಿಂದ ರಿಚ್ಮಂಡ್ ಸರ್ಕಲ್ ಗೆ ಪ್ರಯಾಣಿಸುತ್ತಿದ್ದಳು. ಗಂಜೂರು ಡಿಪೋಗೆ ಸೇರಿದ ಬಿಎಂಟಿಸಿ ಬಸ್ ನ ಕಂಡಕ್ಟರ್ ವಿದ್ಯಾರ್ಥಿನಿ ಜೊತೆ ಅಮಾನವೀಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಶಕ್ತಿಯೋಜನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಫ್ರೀ ಟಿಕೆಟ್ ಗೆ ಆಧಾರ್ ಕಾರ್ಡ್ ತೋರಿಸಿದ್ದಾಳೆ. ಆಧಾರ್ ಕಾರ್ಡ್ ನಲ್ಲಿ ಹಿಂದಿ ಬರಹವಿದೆ ಹಾಗಾಗಿ ದುಡ್ಡು ಕೊಟ್ಟು ಟಿಕೆಟ್ ಖರೀದಿಸುವಂತೆ ಕಂಡಕ್ಟರ್ ಹೇಳಿದ್ದಾನೆ. ಇದಕ್ಕೆ ವಿದ್ಯಾರ್ಥಿನಿ ಹಣ ಕೊಟ್ಟು ಟಿಕೆಟ್ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಆಧಾರ್ ಕಾರ್ಡ್ ತೆಗೆದುಕೊಂಡ ಕಂಡಕ್ಟರ್, ಬಸ್ ನಲ್ಲಿ ಇತರ ಪ್ರಯಾಣಿಕರ ಮುಂದೆ ತೋರಿಸಿ ವಿದ್ಯಾರ್ಥಿನಿಯನ್ನು ನಿಂದಿಸಿದ್ದಾನೆ. ಈ ವೇಳೆ ಬಸ್ ನಲ್ಲಿದ್ದ ಇನ್ನಿಬ್ಬರು ಪ್ರಯಾಣಿಕರು ಕಂಡಕ್ಟರ್ ಗೆ ಸಾಥ್ ನೀಡಿದ್ದಾರೆ.
ಏನ್ ನಿಮ್ಮಪ್ಪಂಗೆ ಹೇಳ್ತೀಯಾ? ನಿಮ್ಮಪ್ಪ ಏನು ಮುಖ್ಯಮಂತ್ರಿನಾ? ಪಿಎಮ್ಮಾ? ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯ ಕತ್ತು ಹಿಡಿದು ಬಸ್ ನಿಂದ ಹೊರಹಾಕಲು ಯತ್ನಿಸಿದ್ದಾರೆ. ಅಲ್ಲದೇ ರಿಚ್ಮಂಡ್ ಸರ್ಕಲ್ ಬಳಿ ವಿದ್ಯಾರ್ಥಿಯನ್ನು ಇಳಿಸದೇ ಕಾರ್ಪೊರೇಷನ್ ಸರ್ಕಲ್ ಬಳಿ ಇಳಿಸಿ ಹೋಗಿದ್ದಾರೆ. ಈ ವಿಷಯವನ್ನು ವಿದ್ಯಾರ್ಥಿನಿ ತಾಯಿಗೆ ಕರೆ ಮಾಡಿ ತಿಳಿಸಿದ್ದಾಳೆ. ಕಾರ್ಪೊರೇಷನ್ ಸರ್ಕಲ್ ಬಳಿ ಬಂದು ತಾಯಿ, ಮಗಳನ್ನು ಕರೆದೊಯ್ದಿದ್ದಾರೆ.
ಹಾಡಹಗಲೇ ಬಿಎಂಟಿಸಿ ಬಸ್ ನಲ್ಲಿ ನಡೆದ ಈ ಘಟನೆ ಇತರ ಪ್ರಯಾಣಿಕರನ್ನೂ ಬೆಚ್ಚಿ ಬೀಳಿಸಿದೆ. ವಿದ್ಯಾರ್ಥಿನಿ ಮೇಲಿನ ದೌರ್ಜನ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.