ಬೆಂಗಳೂರು: ಬಸ್ ಡ್ರೈವ್ ಮಾಡುತ್ತಿದ್ದಾಗಲೇ ಹೃದಾಯಾಘಾತದಿಂದ ಸಾವನ್ನಪ್ಪಿದ ಚಾಲಕ: ನಿರ್ವಾಹಕನ ಸಮಯ ಪ್ರಜ್ಞೆಯಿಂದ ಬಚಾವ್ ಆದ ಪ್ರಯಾಣಿಕರು
ಬೆಂಗಳೂರು: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕಂಡಕ್ಟರ್ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ ಪ್ರಯಾಣಿಕರ ಜೀವ ಉಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಿರಣ್ ಕುಮಾರ್ (40) ಮೃತ ಬಸ್ ಚಾಲಕ. ನೆಲಮಂಗಲ ಟೌನ್ ಬಿನ್ನಿಮಂಗಲ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ದಾಸರಪುರ ಬಸ್ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಕಿರಣ್ ಕುಮಾರ್ ಗೆ ಹಠಾತ್ ಹೃದಯಾಘಾತವಾಗಿ ಸೀಟ್ ನಿಂದ ಕುಸಿದು ಕೆಳಗೆ ಬಿದ್ದಿದ್ದಾರೆ. ನಿಯಂತ್ರಣ ಕಳೆದುಕೊಂಡ ಬಸ್ ಮುಂದೆ ಚಲಿಸುತ್ತಿದ್ದ ಇನ್ನೊಂದು ಬಸ್ ಗೆ ಟಚ್ ಆಗಿದೆ ಅಷ್ಟರಲ್ಲಿ ಡ್ರೈವರ್ ಸೀಟ್ ನಲ್ಲಿ ಹಾರಿ ಕುಳಿತ ಕಂಡಕ್ಟರ್ ಸ್ಟೇರಿಂಗ್ ಹಿಡಿದು, ಬಸ್ ನಿಂತ್ರಣಕ್ಕೆ ತಂದಿದ್ದಾರೆ. ಬ್ರೇಕ್ ಹಾಕಿ ರಸ್ತೆ ಬದಿ ಬಸ್ ನಿಲ್ಲಿಸಿದ್ದಾರೆ. ನಿರ್ವಾಹಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಆದರೆ ಡ್ರೈವರ್ ಸೀಟ್ ನಿಂದ ಕುಸಿದು ಬಿದ್ದ ಚಾಲಕ ಅದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ದೃಶ್ಯ ಬಸ್ ನ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಾಸನ ಮೂಲದ ಕಿರಣ್ ಕುಮಾರ್ ಕಳೆದ 6 ವರ್ಷಗಳಿಂದ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಬಸ್ ಚಲಾಯಿಸುತ್ತಿದ್ದ ವೇಳೆಯೇ ಕಿರಣ್ ಕುಮಾರ್ ಗೆ ಹೃದಯಾಘಾತವಾಗಿ, ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿರ್ವಾಹಕ ಓಬಳೇಶ್ ಬಸ್ ನಿಯಂತ್ರಣಕ್ಕೆ ತೆಗೆದುಕೊಂಡು ಬಸ್ ನಿಲ್ಲಿಸಿದ್ದಾರೆ. ಕಿರಣ್ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.