ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಗಳ ಆರೋಗ್ಯದಲ್ಲಿ ಭಾರಿ ವ್ಯತ್ಯಾಸವಾಗುತ್ತಿದ್ದು, ಬಹುತೇಕ ಸಿಬ್ಬಂದಿಗಳು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ವರದಿಯಲ್ಲಿ ಬಹಿರಂಗವಾಗಿದೆ.
ಜಯದೇವ ಹೃದ್ರೋಗ ಸಂಸ್ಥೆ ಬಿಡುಗಡೆ ಮಾಡಿರುವ ಈ ವರದಿ ಬಿಎಂಟಿಸಿ ಆಡಳಿತ ವರ್ಗದವರನ್ನು ಆಘಾತಕ್ಕೀಡು ಮಾಡಿದೆ.
ಒತ್ತಡದ ಬದುಕಿನಲ್ಲಿ ದುಡಿಯುತ್ತಿರುವ ಬಿಎಂಟಿಸಿ ಚಾಲಕರು, ನಿರ್ವಾಹಕರು, ಸಿಬ್ಬಂದಿಗಳು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅದರಲ್ಲಿಯೂ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೈ ಬಿಪಿ, ಕೊಲೆಸ್ಟ್ರಾಲ್, ಹೈಪರ್ ಟೆನ್ಶನ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದಾರೆ. ಸುಮಾರು 800ರಿಂದ 1000 ಬಿಎಂಟಿಸಿ ಸಿಬ್ಬಂದಿಗಳು ಜಯದೇವ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದ್ದು, ಅದರಲ್ಲಿ ಶೇ.50ರಷ್ಟು ಸಿಬ್ಬಂದಿಗಳು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.