ವಿಮಾನದಲ್ಲಿ ಮುಂಬೈಗೆ ಹೋಗುವ ಪ್ಲಾನ್ ನಲ್ಲಿದ್ದರೆ ನೆಮ್ಮದಿ ಸುದ್ದಿಯೊಂದಿದೆ. ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿಯ ಅಗತ್ಯವಿಲ್ಲ. ಕೊರೊನಾ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಪ್ರಯಾಣಿಕರಿಗೆ ಮಾತ್ರ ಈ ವಿನಾಯಿತಿ ಸಿಗಲಿದೆ.
ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮೇ 12, 2021 ರಂದು ಈ ಆದೇಶ ಹೊರಡಿಸಿತ್ತು. ಕೊರೊನಾ ನಕಾರಾತ್ಮಕ ವರದಿಯಿಲ್ಲದೆ ಮಹಾರಾಷ್ಟ್ರ ಪ್ರವೇಶ ಸಾಧ್ಯವಿಲ್ಲವೆಂದು ಸರ್ಕಾರ ಹೇಳಿತ್ತು. 24 ಗಂಟೆಯೊಳಗಿನ ಕೊರೊನಾ ಪರೀಕ್ಷೆ ವರದಿಯನ್ನು ಪ್ರಯಾಣಿಕರು ತೋರಿಸಬೇಕಿತ್ತು. ವರದಿ ನಕಾರಾತ್ಮಕವಾಗಿದ್ದರೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗಿತ್ತು. ಪ್ರಯಾಣಿಕರು ವರದಿ ನೀಡದೆ ಹೋದಲ್ಲಿ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿ ಪ್ರಯಾಣಕ್ಕೆ ಅನುಮತಿ ನೀಡಲಾಗ್ತಿತ್ತು.
ಹೊಸ ಆದೇಶದ ಪ್ರಕಾರ, ಕೊರೊನಾ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದರೆ, ಮುಂಬೈ ವಿಮಾನ ನಿಲ್ದಾಣ ಸೇರಿದಂತೆ ಮಹಾರಾಷ್ಟ್ರಕ್ಕೆ ತೆರಳಲು ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿ ನೀಡಬೇಕಾಗಿಲ್ಲ. ಮಂಗಳವಾರ ಮಹಾರಾಷ್ಟ್ರದಲ್ಲಿ 7243 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 61,72,645 ಕ್ಕೆ ಏರಿದೆ.