ಜಾಗತಿಕ ತಾಪಮಾನ ಕಡಿಮೆ ಮಾಡುವ ಉದ್ದೇಶದಿಂದ ಸ್ವಚ್ಛ ಇಂಧನ ತಯಾರಿಕೆಗೆ ವಿಶ್ವಾದ್ಯಂತ ಮುಂದುವರಿದ ರಾಷ್ಟ್ರಗಳಲ್ಲಿ ಒತ್ತು ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ಮಿಥೇನ್ ಹಾಗೂ ನೈಸರ್ಗಿಕ ಅನಿಲ ಬಳಸಿ ‘ಬ್ಲೂ ಹೈಡ್ರೋಜನ್’ ಹೆಸರಿನ ಇಂಧನ ಮೂಲವನ್ನು ಆವಿಷ್ಕರಿಸಲಾಗಿದೆ.
ಇದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹಲವು ಅಧ್ಯಯನ, ಪ್ರಯೋಗಗಳಿಂದ ಹೇಳುತ್ತಿದ್ದರೂ ಕೂಡ ಬ್ಲೂ ಹೈಡ್ರೋಜನ್ ತಯಾರಿಕೆಯ ಪ್ರಕ್ರಿಯೆಯಲ್ಲಿಯೇ ಹೊರಸೂಸಲಾಗುವ ಅಪಾಯಕಾರಿ ಪ್ರಮಾಣದ ಅನಿಲಗಳ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
ಕಲ್ಲಿದ್ದಲು, ನೈಸರ್ಗಿಕ ಅನಿಲವನ್ನು ಶಾಖ ಉತ್ಪಾದನೆಗೆ ಬಳಸಿದರೆ ಉತ್ಪನ್ನವಾಗುವ ಕಾರ್ಬನ್ ಕಣಗಳಿಗಿಂತಲೂ 20% ಹೆಚ್ಚು ಬ್ಲೂ ಹೈಡ್ರೋಜನ್ ತಯಾರಿಕೆ ಪ್ರಕ್ರಿಯೆ ಹೊರಸೂಸುತ್ತದೆ ಎನ್ನಲಾಗುತ್ತಿದೆ. ಇಂಗಾಲದ ಡೈ ಆಕ್ಸೈಡ್ ಅನ್ನು ಪ್ರತ್ಯೇಕಿಸಲಾಗುವ ತಯಾರಿಕೆ ಪ್ರಕ್ರಿಯೆಯೇ ನಿಸರ್ಗಕ್ಕೆ ಪೆಟ್ಟು ನೀಡುವ ಸಾಧ್ಯತೆ ಹೆಚ್ಚಿದೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.
ಬ್ಲೂ ಹೈಡ್ರೋಜನ್ ಉತ್ಪಾದನೆ ವೇಳೆ ಹೊರಬರುವ ಹಸಿರು ಮನೆ ಅನಿಲಗಳನ್ನು ನಿಯಂತ್ರಿಸಲು ಸಾಕಷ್ಟು ಸಂಶೋಧನೆ ಇನ್ನೂ ಬೇಕಿದೆ. ಕೈಗಾರಿಕೆಗಳಲ್ಲಿ ಈ ಬಗ್ಗೆ ಶೋಧಕಗಳನ್ನು ಅಳವಡಿಸಿದ ಬಳಿಕವೇ ಬ್ಲೂ ಹೈಡ್ರೋಜನ್ ಬಳಕೆ ಹೆಚ್ಚಿಸಬೇಕು ಎಂದು ಹೇಳಲಾಗುತ್ತಿದೆ.