ಕೋವಿಡ್ 19 ರೋಗಿಗಳಲ್ಲಿ ಪ್ಲಾಸ್ಮಾ ಥೆರಪಿಯು ಸಾವಿನ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನದ ಪ್ರಕಾರ ಪ್ಲಾಸ್ಮಾ ಥೆರಪಿಗೆ ಒಳಗಾಗುವ ರೋಗಿಗಳು ಹೆಚ್ಚು ಗಂಭೀರವಾದ ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ ಎಂದೂ ತಿಳಿದುಬಂದಿದೆ.
ಜರ್ನಲ್ ನೇಚರ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ವರದಿಯ ಪ್ರಕಾರ ಕೊರೊನಾಗೆ ಒಳಗಾದ ರೋಗಿಯ ರಕ್ತದಲ್ಲಿ ಆ್ಯಂಟಿಬಾಡಿ ಪ್ರೊಫೈಲ್ಗಳಲ್ಲಿ ವ್ಯತ್ಯಾಸ ಕಂಡುಬರುತ್ತಿರುತ್ತದೆ. ಇದು ಚಿಕಿತ್ಸೆಗೆ ದೇಹವು ಪ್ರತಿಕ್ರಿಯಿಸುವ ರೀತಿಯನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಕೋವಿಡ್ನಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತವನ್ನು ಇತರೆ ಸೋಂಕಿತರಿಗೆ ನೀಡುವ ಮೂಲಕ ಅವರು ಚೇತರಿಸಿಕೊಳ್ಳಲು ನೀಡಲಾಗುತ್ತದೆ. ಇದನ್ನೇ ಪ್ಲಾಸ್ಮಾ ಥೆರಪಿ ಎಂದು ವಿಶ್ಲೇಷಿಸಬಹುದಾಗಿದೆ.
ಕೋವಿಡ್ 19ನಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದ ರಕ್ತದಲ್ಲಿ ಪ್ಲಾಸ್ಮಾ ಕಣವು ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯು ಬದುಕಲು ಸಹಾಯ ಮಾಡುತ್ತದೆ ಎಂದೇ ಇಲ್ಲಿಯವರೆಗೂ ಯೋಚಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಈ ಯೋಚನೆಯು ಸುಳ್ಳಾಗಿದೆ ಎಂದು ಅಧ್ಯಯನದ ಸಹ ಪ್ರಾಂಶುಪಾಲ ತನಿಖಾಧಿಕಾರಿ ಡೋನಾಲ್ಡ್ ಆರ್ನೋಲ್ಡ್ ಹೇಳಿದ್ದಾರೆ. ಇವರು ಕೆನಡಾದ ಮೆಕ್ಮಾಸ್ಟರ್ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿದ್ದಾರೆ. ಕೋವಿಡ್ 19ನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗದಂತೆ ಎಚ್ಚರಿಕೆ ನೀಡುತ್ತೇವೆ ಎಂದು ಅವರು ಹೇಳಿದ್ರು.
ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಗುಣಮುಖರಾಗುವುದಕ್ಕಿಂತ ಹೆಚ್ಚಾಗಿ ಗಂಭೀರವಾದ ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತಾರೆ ಎಂದು ಈ ಸಂಶೋಧನೆಯು ಕಂಡುಹಿಡಿದಿದೆ. ಪ್ರತಿಕೂಲ ಪರಿಣಾಮಗಳಲ್ಲಿ ಹೆಚ್ಚಾಗಿ ಆಮ್ಲಜನಕದ ಅಗತ್ಯತೆ ಹೆಚ್ಚುವುದು ಹಾಗೂ ಉಸಿರಾಟದ ತೊಂದರೆ ಉಂಟಾಗುವುದು ಸಾಮಾನ್ಯ ಅಡ್ಡಪರಿಣಾಮವಾಗಿದೆ. ಕೋವಿಡ್ 19ನಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ನಿಯಂತ್ರಿಸುವಲ್ಲಿಯೂ ಪ್ಲಾಸ್ಮಾ ಥೆರಪಿಯು ಯಾವುದೇ ಪ್ರಮುಖ ಪಾತ್ರವನ್ನು ವಹಿಸಿಲ್ಲ ಎಂದು ಈ ಅಧ್ಯಯನ ಹೇಳಿದೆ.