ಹೊಳೆಯುವುದೆಲ್ಲ ಚಿನ್ನವಲ್ಲ ಎಂಬ ಮಾತೊಂದಿದೆ. ಈ ಮಾತು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಜೀವನದಲ್ಲಿ ನಿಜವಾದಂತಿದೆ. ಸುಕೇಶ್ ಚಂದ್ರಶೇಖರ್ ಕೈಯಿಂದ ಪಡೆದ ದುಬಾರಿ ಉಡುಗೊರೆಗಳು ಇದೀಗ ಜಾಕ್ವೆಲಿನ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿರೋದಂತೂ ನಿಜ.
ವಂಚಕ ಸುಖೇಶ್ ಚಂದ್ರಶೇಖರ್ ಜಾಕ್ವೆಲಿನ್ ಬಳಿ ತನ್ನ ನಿಜ ನಾಮಧೇಯವನ್ನು ಪರಿಚಯ ಮಾಡಿಕೊಂಡಿರಲಿಲ್ಲ. ಸನ್ ಟಿವಿ ಮಾಲೀಕ ಹಾಗೂ ತಮಿಳು ನಾಡು ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾರ ರಾಜಕೀಯ ಕುಟುಂಬದ ಸದಸ್ಯ ಎಂದು ಸುಕೇಶ್ ಜಾಕ್ವೆಲಿನ್ ಬಳಿ ಹೇಳಿಕೊಂಡಿದ್ದ.
ನಿಮ್ಮ ದೊಡ್ಡ ಅಭಿಮಾನಿ ಎಂದು ಜಾಕ್ವೆಲಿನ್ ಬಳಿ ಹೇಳಿಕೊಂಡಿದ್ದ ಈತ ಶೀಘ್ರದಲ್ಲಿಯೇ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ಸಾಕಷ್ಟು ಚಾನ್ಸ್ ಕೊಡಿಸುವುದಾಗಿಯೂ ಜಾಕ್ವೆಲಿನ್ಗೆ ಹೇಳಿದ್ದ ಎನ್ನಲಾಗಿದೆ.
ಸುಕೇಶ್ ಚಂದ್ರಶೇಖರ್ ಒಬ್ಬ ಮಿಲಿಯೇನರ್ ವಂಚಕ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಈತ ಅನೇಕ ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಅಷ್ಟೇ ಏಕೆ ಸುಕೇಶ್ ಚಂದ್ರಶೇಖರ್ ಜೊತೆ ಥಳುಕು ಹಾಕಿಕೊಂಡಿರುವ ಜಾಕ್ವೆಲಿನ್ ಹಾಗೂ ನೋರಾ ಫತೇಹಿ ಇವರಿಗೂ ಈತ ಕೋಟಿಗಟ್ಟಲೇ ಹಣವನ್ನು ವಂಚನೆ ಮಾಡಿದ್ದ.
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಸುಕೇಶ್ 12ನೇ ತರಗತಿ ಮುಗಿಯೋವಷ್ಟರಲ್ಲೇ ಕಾಲೇಜು ಜೀವನಕ್ಕೆ ಗುಡ್ ಬೈ ಹೇಳಿದ್ದ. ಕೆಲ ಸಮಯದ ಹಿಂದಷ್ಟೇ ಮೃತಪಟ್ಟ ಈತನ ತಂದೆ ಚಂದ್ರಶೇಖರ್ ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು ಎಂಬ ಅಭಿಲಾಷೆಯನ್ನು ಹೊಂದಿದ್ದರಂತೆ.
ಅಪ್ರಾಪ್ತ ವಯಸ್ಸಿನಲ್ಲಿಯೇ ಕಾರ್ ರೇಸ್ ನಡೆಸುತ್ತಿದ್ದ ಈತ ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದ.
ಕೇವಲ 17 ವರ್ಷ ಪ್ರಾಯದವನಾಗಿದ್ದಾಗಲೇ ಈತನಿಗೆ ವಂಚಕ ಬುದ್ಧಿ ಮೈಗಂಟಿ ಹೋಗಿತ್ತು. ಸರ್ಕಾರಿ ಅಧಿಕಾರಿಯ ಸೋಗಿನಲ್ಲಿ ಅಮಾಯಕರಿಗೆ ಕರೆ ಮಾಡಿ ಹಣ ಪೀಕುತ್ತಿದ್ದ. 18 ವರ್ಷ ವಯಸ್ಸಿನವನಾಗಿದ್ದಲೇ ಜನರಿಗೆ ಸರ್ಕಾರಿ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ನಂಬಿಸಿ ಕೋಟಿಗಟ್ಟಲೇ ಹಣ ವಂಚಿಸಿದ್ದ. ಆದರೆ ಈತನ ಕಳ್ಳಾಟ ಬಹುಬೇಗನೆ ಬೆಳಕಿಗೆ ಬಂದಿತ್ತು. 2007ರಲ್ಲಿ ಬೆಂಗಳೂರು ಪೊಲೀಸರು ಮೊಟ್ಟ ಮೊದಲು ಬಂಧಿಸಿದ್ದರು.
ಜೈಲಿಗೆ ಹೋದರೂ ಬುದ್ಧಿ ಕಲಿಯುವ ಜಾಯಮಾನವಂತೂ ಈತನದ್ದಾಗಿರಲಿಲ್ಲ. ಜನರನ್ನು ಮೋಸಗೊಳಿಸುತ್ತಲೇ ಹಣ ವಂಚಿಸುತ್ತಿದ್ದ ಸುಖೇಶ್ ಅನೇಕ ಬಾರಿ ಜೈಲುಪಾಲಾಗಿದ್ದಾನೆ. ಜಾಮೀನಿನ ಮೂಲಕ ಹೊರಬಂದ ಸಂದರ್ಭಗಳಲ್ಲೂ ಈತ ತನ್ನ ಕಳ್ಳ ಕೆಲಸವನ್ನು ಮುಂದುವರಿಸಿದ್ದ.
ಜಾರಿ ನಿರ್ದೇಶನಾಲಯದಲ್ಲಿರುವ ಚಾರ್ಜ್ಶೀಟ್ನ ಪ್ರಕಾರ ಸುಕೇಶ್ ಚಂದ್ರಶೇಖರ್ ಜಾಕ್ವಲಿನ್ ಫರ್ನಾಂಡಿಸ್ ಬಳಿ ಶೇಖರ್ ರತ್ನ ವೇಲಾ ಎಂದು ಪರಿಚಯ ಮಾಡಿಕೊಂಡಿದ್ದನಂತೆ. ಮೇಕಪ್ ಆರ್ಟಿಸ್ಟ್ ಶಾನ್ ಮುತ್ತಹಿಲ್ ಮೂಲಕ ಸುಕೇಶ್ ಜಾಕ್ವೆಲಿನ್ ಗೆಳತನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದನು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಚೇರಿ ಹೆಸರನ್ನು ಬಳಕೆ ಮಾಡಿಕೊಂಡು ಈತ ಜಾಕ್ವೆಲಿನ್ ಜೊತೆ ಸಂಪರ್ಕ ಸಾಧಿಸಿದ್ದ ಎನ್ನಲಾಗಿದೆ.
ಸುಕೇಶ್ ಪ್ರಕರಣದಲ್ಲಿ ಕೇಳಿ ಬಂದ ಮತ್ತೊಂದು ಹೆಸರು ಅಂದರೆ ನಟಿ ನೋರಾ ಫತೇಹಿ. ವಂಚಿಸಿದ ಹಣದಿಂದ ಸುಕೇಶ್, ನೋರಾಗೆ ಬಿಎಂಡಬ್ಲು ಕಾರು ಕೊಡಿಸಿದ್ದಾನೆ ಎಂದು ಇಡಿ ಹೇಳಿತ್ತು. ಮೊದಲು ಈ ಆರೋಪ ನಿರಾಕರಿಸಿದ್ದ ನಟಿ ಬಳಿಕ ಒಪ್ಪಿಕೊಂಡಿದ್ದರು.