ಬೆಂಗಳೂರು: ಅಂಧ ವಿದ್ಯಾರ್ಥಿನಿಯೊಬ್ಬಳಿಗೆ ಕೆಲಸ ಕೊಡಿಸುವ ಮೂಲಕ ಆಕೆಯ ಸ್ವಾಲಂಭಿ ಬದುಕಿನ ಕನಸನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ನನಸಾಗಿಸಿದ್ದಾರೆ.
ಯಲಹಂಕದಲ್ಲಿ ನಡೆದ ’ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಹಾಗೂ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಂಧ ವಿದ್ಯಾರ್ಥಿನಿ ದಿವ್ಯಾಂಜಲಿ ಎಂಬುವವರು ತಾನು ಪದವಿ ಓದಿದ್ದರೂ ಕಣ್ಣುಕಾಣಲ್ಲ ಎಂಬ ಕಾರಣಕ್ಕೆ ಯಾರೂ ಕೆಲಸ ಕೊಡುತ್ತಿಲ್ಲ. ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಕೆಲಸ ದೊರಕಿಸಿಕೊಡುವಂತೆ ಮನವಿ ಮಾಡಿದರು.
ದಿವ್ಯಾಂಜಲಿ ಪದವಿ ಸರ್ಟಿಫಿಕೇಟ್ ಪರಿಶೀಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ತಕ್ಷಣ ಸ್ಥಳದಲ್ಲಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿ ಬಿಬಿಎಂಪಿಯಲ್ಲಿ ಕೆಲಸ ಕೊಡಿಸಿದ್ದಾರೆ. ದಿವ್ಯಾಂಜಲಿಗೆ ಕಾಲ್ ಸೆಂಟರ್ ಅಥವಾ ಕುಳಿತು ಮಾಡುವ ಕೆಲಸವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಎ ಪದವಿಧರೆಯಾಗಿರುವ ದಿವ್ಯಾಂಜಲಿ ಶಾಂತಿಧಾಮ ಸಂಸ್ಥೆಯ ಅಂಧ ವಿದ್ಯಾರ್ಥಿನಿಯಾಗಿದ್ದು, ಸ್ವಾವಲಂಭಿಯಾಗಿ ಬದುಕಬೇಕು ಎಂಬ ಕನಸು ಹೊತ್ತಿದ್ದಾರೆ. ಕೆಲಸಕ್ಕಾಗಿ ಹಲವೆಡೆ ಪ್ರಯತ್ನಿಸಿದ್ದರೂ ಕಣ್ಣು ಕಾಣಲ್ಲ ಎಂಬ ಕಾರಣಕ್ಕೆ ಕೆಲಸ ಸಿಕ್ಕಿರಲಿಲ್ಲ. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಆಕೆಗೆ ಕೆಲಸ ಕೊಟ್ಟು ವಿದ್ಯಾರ್ಥಿನಿ ಬಾಳಿಗೆ ಬೆಳಕಾಗಿದ್ದಾರೆ.