ಅಮೆರಿಕಾದ ಉತ್ತರ ಕೆರೊಲಿನಾದ ಕ್ಲಾರ್ಕ್‌ಟನ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ತಾನು ಕುರುಡನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ 911ಗೆ ಕರೆ ಮಾಡಿ ಮೂರು ಕೊಲೆಗಳ ಬಗ್ಗೆ ವರದಿ ಮಾಡಿದ್ದ. ಆದರೆ, ಆತನೇ ಕೊಲೆಗಡುಕ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಾರ್ಚ್ 17 ರಂದು ಕ್ಲಾರ್ಕ್‌ಟನ್‌ನ ಮನೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಬಂದಾಗ ಕೆವಿನ್ ಮಸ್ಸರ್ ಎಂಬಾತ ರಕ್ತಸಿಕ್ತ ಬಟ್ಟೆಯಲ್ಲಿ ಕೈಯಲ್ಲಿ ಬಂದೂಕು ಹಿಡಿದು ನಿಂತಿದ್ದ. ಆತ 22 ನಿಮಿಷಗಳ ಹಿಂದೆ 911 ಕರೆ ಮಾಡಿದ್ದ. ಆ ಕರೆಯಲ್ಲಿ ತಾನು “ಅಂಧ” ಎಂದು ಸುಳ್ಳು ಹೇಳಿದ್ದ. ಮನೆಯೊಳಗೆ ಮೂವರು ಪುರುಷರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹೇಳಿದ್ದ. ತನಗೂ ಕೈಗೆ ಗುಂಡು ತಗುಲಿದೆ ಎಂದು ಹೇಳಿಕೊಂಡಿದ್ದ. ಮೃತರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದ.
ಪೊಲೀಸರು ಬಂದಾಗ, ಮಸ್ಸರ್ ಕ್ಷಣಕಾಲ ಬಾಗಿಲು ಮುಚ್ಚಿ ಹಿಂಭಾಗದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ, ಪೊಲೀಸರು ಆತನನ್ನು ಬಂಧಿಸಿದ್ದು, ಗಂಭೀರ ಗಾಯಗಳಾಗಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮನೆಯೊಳಗೆ ಮೂವರು ಪುರುಷರ ಮೃತದೇಹಗಳು ಪತ್ತೆಯಾದವು. ಮೃತರನ್ನು ಡೇನಿಯಲ್ ಡೆನ್ನಿಸ್ (62), ರಾಂಡಿ ಬೆಂಟನ್ (54) ಮತ್ತು ಫಿಲಿಪ್ ಪಾಲ್ಮರ್ (32) ಎಂದು ಗುರುತಿಸಲಾಗಿದೆ. ಅವರೆಲ್ಲರಿಗೂ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಲಾಗಿತ್ತು ಎಂದು ಬ್ಲೇಡನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಪೊಲೀಸರ ಕ್ರಿಮಿನಲ್ ತನಿಖಾ ವಿಭಾಗದ ವಿಚಾರಣೆಯ ನಂತರ, ಮಸ್ಸರ್ ವಿರುದ್ಧ ಮೂರು ಕೊಲೆ, ಅಪಾಯಕಾರಿ ಆಯುಧದಿಂದ ದರೋಡೆ ಮತ್ತು ಮೆಥಾಂಫೆಟಮೈನ್ ಹೊಂದಿದ್ದ ಆರೋಪಗಳನ್ನು ದಾಖಲಿಸಲಾಗಿದೆ. ಮಸ್ಸರ್ ಮೃತರ ಪರ್ಸ್ ಕದ್ದಿದ್ದಾನೆ ಎಂಬ ಆರೋಪವೂ ಇದೆ. ಮಸ್ಸರ್ ಪ್ರಸ್ತುತ ಬ್ಲೇಡನ್ ಕೌಂಟಿ ಬಂಧನ ಕೇಂದ್ರದಲ್ಲಿ ಬಾಂಡ್ ಇಲ್ಲದೆ ಜೈಲಿನಲ್ಲಿದ್ದಾನೆ.