ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮನೆಯೊಂದರಲ್ಲಿ ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಓರ್ವ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ರಾಗದ್‌ಗಂಜ್ ಗ್ರಾಮದ ಮೊಹಮ್ಮದ್ ಫಾರೂಕ್ ಅವರ ನಿವಾಸದಲ್ಲಿ ಪಟಾಕಿ ತಯಾರಿಸುತ್ತಿದ್ದ ವೇಳೆಯಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಮೃತರನ್ನು ಆಕಾಶ್(15) ಮತ್ತು ಲಲ್ಲು (30) ಎಂದು ಗುರುತಿಸಲಾಗಿದೆ. ವೈದ್ಯಕೀಯ ಕಾಲೇಜಿಗೆ ತೆರಳುವ ಮಾರ್ಗಮಧ್ಯೆ ಆಕಾಶ್ ಮತ್ತು ಲಲ್ಲು ಮೃತಪಟ್ಟರೆ, ಇತರ ಮೂವರಾದ ಇಶ್ತಿಯಾಕ್(40), ಅಯಾಸ್(17) ಮತ್ತು ಕೃಷ್ಣ ಕುಮಾರ್(24) ಗಾಯಗೊಂಡಿದ್ದಾರೆ. ಇನ್ನುಳಿದ ಮೂವರು ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಗಿದೆ ಎಂದು ಡಾ.ದೀಪಕ್ ಸಿಂಗ್ ತಿಳಿಸಿದ್ದಾರೆ.
ಸ್ಫೋಟದ ರಭಸಕ್ಕೆ ಮನೆಯ ಗೋಡೆ ಕುಸಿದು ಪಕ್ಕದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಗೊಂಡಾ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಅವರು ಶ್ವಾನ ದಳ ಮತ್ತು ಕ್ಷೇತ್ರ ಘಟಕಗಳು ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.