ಇಸ್ಲಾಮಾಬಾದ್: ಸೌದಿ ಅರೇಬಿಯಾದ ಮದೀನಾದಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಶರೀಫ್ ಅವರನ್ನು ಪಾಕ್ ಮಾಜಿ ಪ್ರಧಾನಿಯ ಬೆಂಬಲಿಗರು ಅವಮಾನಿಸಿದ ಹಿನ್ನೆಲೆಯಲ್ಲಿ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಇತರರ ಮೇಲೆ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಧರ್ಮನಿಂದನೆ ಪ್ರಕರಣವನ್ನು ದಾಖಲಿಸಲಾಗಿದೆ.
ಮದೀನಾಕ್ಕೆ ಭೇಟಿ ನೀಡಿದ ಪ್ರಧಾನಿ ಹಾಗೂ ಅವರ ನಿಯೋಗದ ವಿರುದ್ಧ ಇಮ್ರಾನ್ ಬೆಂಬಲಿಗರು ಗೂಂಡಾಗಿರಿ ನಡೆಸಿದ ಹಾಗೂ ಘೋಷಣೆ ಕೂಗಿದ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗುವುದು ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಘೋಷಿಸಿದ್ದಾರೆ.
ಮಾಜಿ ಆಂತರಿಕ ಸಚಿವ ಶೇಖ್ ರಶೀದ್ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಶಹಬಾಜಿ ಗಿಲ್ ಮತ್ತಿತರನ್ನು ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.
ಲಂಡನ್ ನಲ್ಲೂ ನಡೆಯಲಿದೆ ʼಹನುಮಾನ್ ಚಾಲೀಸʼ ಪಠಣ
ಏನು ಸಂಭವಿಸಿತ್ತು ?
ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ವಿಡಿಯೋ ಕ್ಲಿಪ್ ಒಂದರಲ್ಲಿ, ಕಳೆದ ಮಂಗಳವಾರ ಪಾಕ್ ಪ್ರಧಾನಿ ಮತ್ತು ಇತರರು ಮದೀನಾದಲ್ಲಿರುವ ಪ್ರವಾದಿಯ ಮಸೀದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಮ್ರಾನ್ ಖಾನ್ ಬೆಂಬಲಿಗರೆಂದು ಹೇಳಲಾದ ಯಾತ್ರಿಗಳು- ‘ಚೋರ್’ (ಕಳ್ಳ) ಮತ್ತು ‘ಗದ್ದಾರ್’ (ದೇಶದ್ರೋಹಿ) ಎಂದು ಕೂಗಿದ್ದಾರೆ. ಈ ನಿಯೋಗದ ವಿರುದ್ಧ ಪಾಕಿಸ್ತಾನಿ ಯಾತ್ರಿಗಳು ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ ಎಂದೂ ಆರೋಪಿಸಲಾಗಿದೆ.
ಘೋಷಣೆಗಳನ್ನು ಕೂಗಿದ ಐವರು ಪಾಕಿಸ್ತಾನಿಗಳನ್ನು ಬಂಧಿಸಿರುವುದಾಗಿ ಮದೀನಾ ಪೊಲೀಸರು ಹೇಳಿಕೊಂಡಿದ್ದಾರೆ. ಇದೇ ವೇಳೆ, ಶನಿವಾರ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರು ತಮಗೂ ಘೋಷಣೆ ಕೂಗಿದ ಯಾತ್ರಿಗಳಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಪವಿತ್ರ ಸ್ಥಳದಲ್ಲಿ ಇಂತಹ ಘೋಷಣೆ ಕೂಗುವುದನ್ನು ಕಲ್ಪಿಸಿಕೊಳ್ಳಲೂ ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.