ಬೆಂಗಳೂರು: ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವ ಶಾಸಕ ಎಸ್.ಟಿ.ಸೋಮಶೇಖ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮನವೊಲಿಕೆ ಯತ್ನ ನಡೆಸಿದೆ. ಇದರ ಮುಂದುವರೆದ ಭಾಗವಾಗಿ ಸೋಮಶೇಖರ್ ದೂರು ನೀಡಿದ್ದ ಮುಖಂಡರ ವಿರುದ್ಧ ಉಚ್ಛಾಟನೆ ಕ್ರಮ ಕೈಗೊಂಡಿದೆ.
ಯಶವಂತಪುರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮಾರೇಗೌಡ ಹಾಗೂ ಉಪಾಧ್ಯಕ್ಷ ಧನಂಜಯ ಇಬ್ಬರನ್ನೂ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ವಿಧಾನಸಭಾ ಚುನಾವಣೆ ವೇಳೆ ಇಬ್ಬರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು. ತನ್ನ ವಿರುದ್ಧ ಪಿತೂರಿ ಮಾಡಿದ್ದರು ಎಂದು ಎಸ್.ಟಿ.ಸೋಮಶೇಖರ್ ಮಂಡಲದ ಇಬ್ಬರ ವಿರುದ್ಧ ಬಿಜೆಪಿ ನಾಯಕರಿಗೆ ದೂರು ನೀಡಿದ್ದರು. ಆದರೆ ಈವರೆಗೆ ಬಿಜೆಪಿ ಯಾವುದೇ ಶಿಸ್ತುಕ್ರಮ ಕೈಗೊಂಡಿರಲಿಲ್ಲ. ಇದೀಗ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಗೆ ಮರಳುವ ತಯಾರಿ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದಂತೆಯೇ ಬಿಜೆಪಿ ಇಬ್ಬರು ನಾಯಕರಿಗೆ ಗೇಟ್ ಪಾಸ್ ನೀಡುವ ಮೂಲಕ ಸೋಮಶೇಖರ್ ಸಮಾಧಾನಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.