ಬೆಂಗಳೂರು: ಮೃತಪಟ್ಟಿದ್ದ ಎಂಜಿನಿಯರ್ ವರ್ಗಾವಣೆ ಮಾಡುವ ಮೂಲಕ ನಗರಾಭಿವೃದ್ಧಿ ಇಲಾಖೆ ಎಡವಟ್ಟು ಮಾಡಿಕೊಂಡಿದ್ದು, ಈ ಬಗ್ಗೆ ಬಿಜೆಪಿ ಇಲಾಖೆಯ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ತಮ್ಮ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ಕಾನೂನು ಕುಣಿಕೆಯಿಂದ ಪಾರು ಮಾಡಲು ಮೂಡಾ ಹಗರಣದ ಕಡತಗಳನ್ನು ನಾಪತ್ತೆ ಮಾಡುವ ಕಾರ್ಯದಲ್ಲಿ ಇತ್ತ ನಿರತರಾಗಿದ್ದಾರೆ. ಅತ್ತ ಅವರ ನಗರಾಭಿವೃದ್ಧಿ ಇಲಾಖೆ ಸಂಪೂರ್ಣ ನಿಷ್ಕ್ರೀಯಗೊಂಡಿದ್ದು, 6 ತಿಂಗಳ ಹಿಂದೆ ಮೃತಪಟ್ಟಿರುವ ಅಧಿಕಾರಿಯನ್ನು ವರ್ಗಾವಣೆ ಮಾಡಿ ಎಡವಟ್ಟು ಮಾಡಿಕೊಂಡು ರಾಜ್ಯದ ಜನರ ಮುಂದೆ ನಗೆಪಾಟಲಿಗಿಡಾಗಿರುವುದು ನಾಚಿಕೆಗೇಡೀನ ಸಂಗತಿ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಕಲಬುರ್ಗಿ ಜಿಲ್ಲೆಯ ಸೇಡಂ ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಆಗಿದ್ದ ಅಶೋಕ ಪುಟಪಾಕ 6 ತಿಂಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದರೆ ಸರ್ಕಾರ ಈಗ ಅವರನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ಘಟನೆ ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ವಿಪಕ್ಷ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದೆ.