ಲಖ್ನೋ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಸಚಿವ ಸಂಪುಟ ಪುನಾರಚನೆ ಮಾಡುವ ಕುರಿತಂತೆ ಉತ್ತರ ಪ್ರದೇಶ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ಭೇಟಿಯಾಗಿದ್ದಾರೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಮೊದಲು ರಾಜ್ಯದಲ್ಲಿ ಸಂಪುಟ ಪುನರಚನೆ ಮಾಡಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ಅನೇಕ ಬೆಳವಣಿಗೆ ನಡೆದಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪಂಚಾಯತಿ ಚುನಾವಣೆ ಫಲಿತಾಂಶ ಕೊರೋನಾ ಪರಿಸ್ಥಿತಿ ನಿರ್ವಹಣೆ ಸೇರಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ಬಿಜೆಪಿ ಸಂಘಟನೆ ದೃಷ್ಟಿಯಿಂದ ಪಕ್ಷವನ್ನು ಪುನಾರಚನೆ ಮಾಡಲು ನಿರ್ಧರಿಸಲಾಗಿದೆ.
ಸರ್ಕಾರ ಮತ್ತು ಪಕ್ಷದಲ್ಲಿ ಬದಲಾವಣೆಗೆ ಮುಂದಾಗಿರುವ ನಾಯಕರು ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಇದರ ಭಾಗವಾಗಿಯೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಲಖ್ನೋಗೆ ಆಗಮಿಸಿ ಸಚಿವರು ಮತ್ತು ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ವೇಳೆ ರಾಧಾ ಮೋಹನ್ ಸಿಂಗ್ ಕೂಡ ಇದ್ದರು.
ಸಭೆಯಲ್ಲಿ ಅನೇಕ ನಾಯಕರು ಕೊರೋನಾ ನಿರ್ವಹಣೆ ವೈಫಲ್ಯ, ಜನರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ, ಸರ್ಕಾರ ಮತ್ತು ಪಕ್ಷದ ನಾಯಕರ ನಡುವಿನ ಸಮನ್ವಯದ ಕೊರತೆ ಮುಂತಾದ ಸಮಸ್ಯೆಗಳ ಬಗ್ಗೆ ತಿಳಿಸಿದ್ದರರೆನ್ನಲಾಗಿದೆ. ಇದರ ಮುಂದುವರೆದ ಭಾಗವಾಗಿ ಸಂಪುಟ ಪುನಾರಚನೆ ಮಾಡಲು ಇಂದು ರಾಜ್ಯಪಾಲರನ್ನು ಭೇಟಿಯಾಗಿ ರಾಧಾ ಮೋಹನ್ ಸಿಂಗ್ ಚರ್ಚಿಸಿದ್ದಾರೆ.