ಪಶ್ಚಿಮ ಮಿಡ್ನಾಪುರ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆ ಗಮನ ಸೆಳೆದಿದೆ.
ಪಶ್ಚಿಮಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಸೌರವ್ ಗಂಗೂಲಿ ಅವರ ಬ್ಯಾಟಿಂಗ್ ನಂತೆ ಇರಲಿದೆ. ಸ್ಪಷ್ಟ ಬಹುಮತದೊಂದಿಗೆ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಶ್ಚಿಮ ಮಿಡ್ನಾಪುರ್ ನಲ್ಲಿ ಮಾತನಾಡಿದ ಅವರು, ಭಾರತದ ಮಾಜಿ ನಾಯಕರಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕ್ರೀಸ್ ನಿಂದ ಹೊರಬಂದಾಗ ಸಿಕ್ಸರ್ ಹೊಡೆಯುವುದು ಖಚಿತವಾಗಿತ್ತು. ಅದೇ ರೀತಿ ಬಿಜೆಪಿ ಕ್ರೀಸ್ ದಾಟಿದ್ದು ಚುನಾವಣೆಯಲ್ಲಿ ಖಂಡಿತವಾಗಿಯೂ ಸಿಕ್ಸರ್ ಬಾರಿಸಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೌರವ್ ಗಂಗುಲಿ ಕ್ರೀಸ್ ದಾಟಿದಾಗಲೆಲ್ಲ ಸಿಕ್ಸರ್ ಹೊಡೆಯುತ್ತಾರೆ. ಅದೇ ರೀತಿ ನಿಮ್ಮೆಲ್ಲರ ಬೆಂಬಲದಿಂದ ನಾವು ಲೋಕಸಭೆ ಚುನಾವಣೆಯಲ್ಲಿ ಕ್ರೀಸ್ ದಾಟಿದ್ದು ಈ ಚುನಾವಣೆಯಲ್ಲಿ ಸಿಕ್ಸರ್ ಬಾರಿಸಲಿದ್ದೇವೆ ಎಂದು ಹೇಳಿದ್ದಾರೆ.
ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜನಾಥ್ ಸಿಂಗ್ ನೀಡಿದ ಈ ಹೇಳಿಕೆ ಭಾರೀ ಕುತೂಹಲ ಮೂಡಿಸಿದೆ. ಬಿಜೆಪಿ ಸಿಎಂ ಅಭ್ಯರ್ಥಿ ಇಲ್ಲದೇ ಚುನಾವಣೆ ಎದುರಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜನಾಥ್ ಸಿಂಗ್, ನಮ್ಮದು ಪ್ರಜಾಪ್ರಭುತ್ವ ಪಕ್ಷ. ಚುನಾಯಿತ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.