ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಬಹುಮತ ಗಳಿಸಿದ್ದು, ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೇರಲು ಸಿದ್ಧತೆ ನಡೆಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ 300ಕ್ಕೂ ಅಧಿಕ ಸೀಟ್ ಗಳಿಸಿದ್ದು, ಆದರೆ ಈ ಬಾರಿ ಏಕಾಂಗಿಯಾಗಿ ಬಹುಮತ ಪಡೆಯಲು ವಿಫಲವಾಗಿದೆ. ಹೀಗಾಗಿ ಮಿತ್ರ ಪಕ್ಷಗಳ ಮೇಲೆ ಅವಲಂಬಿಸುವುದು ಅನಿವಾರ್ಯವಾಗಿದೆ.
ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಗೆದ್ದಿದ್ದು, ಅದರಲ್ಲೂ ಶ್ರೀ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಸೋಲಿನಿಂದ ಹತಾಶಗೊಂಡಿರುವ ಆ ಪಕ್ಷದ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರಾಮ ಹಾಗೂ ಹಿಂದುಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ.
500 ವರ್ಷಗಳ ಕಾಲ ಟೆಂಟ್ ನಲ್ಲಿದ್ದ ಶ್ರೀರಾಮನಿಗೆ ಭವ್ಯ ರಾಮಮಂದಿರ ಕಟ್ಟಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಒಬ್ಬರು, ನಾನು ಅಯೋಧ್ಯೆಗೆ ಹೋಗುವುದಿಲ್ಲ, ಶ್ರೀರಾಮನ ದರ್ಶನ ಮಾಡುವುದಿಲ್ಲ ಎಂದಿದ್ದರೆ, ಮತ್ತೊಬ್ಬರು ಅಯೋಧ್ಯೆಗೆ ಹೋದರೂ ಸಹ ಅಲ್ಲಿನ ವ್ಯಾಪಾರಿಗಳ ಬಳಿ ಒಂದು ರೂಪಾಯಿ ವ್ಯಾಪಾರವನ್ನು ಸಹ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ರೀತಿಯ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿಗೆ ಮತ ಹಾಕಿದರೆ ಮಾತ್ರ ಹಿಂದೂನಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.