
ಚಂಡೀಗಢ: ಪಂಜಾಬ್ ನಲ್ಲಿ ಬಿಜೆಪಿ ಶಾಸಕನೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿ ಬಟ್ಟೆ ಹರಿದು ಹಾಕಿ ಬೆತ್ತಲೆ ಮಾಡಿದ ಘಟನೆ ನಡೆದಿದೆ.
ಪಂಜಾಬ್ ನಲ್ಲಿ ಬಿಜೆಪಿ ಮುಖಂಡರ ವಿರುದ್ಧ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಬೋಹರ್ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ನಾರಂಗ್ ಅವರ ಮೇಲೆ ಹಲ್ಲೆ ಮಾಡಲಾಗಿದೆ.
ಮುಕ್ತಸರ್ ಜಿಲ್ಲೆಯ ಮೌಲೆಟ್ ನಲ್ಲಿ ಸುದ್ದಿಗೋಷ್ಠಿ ನಡೆಸಲು ಬಂದಿದ್ದ ವೇಳೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ವಿರೋಧ ವ್ಯಕ್ತಪಡಿಸಿದ್ದು, ಕಾಯ್ದೆ ಪರವಾಗಿ ಶಾಸಕ ಅರುಣ್ ನಾರಂಗ್ ಮಾತನಾಡಲು ಮುಂದಾಗುತ್ತಿದ್ದಂತೆ ರೈತರು ಮುಗಿಬಿದ್ದಿದ್ದಾರೆ. ಅವರ ಮೇಲೆ ಕಪ್ಪು ಮಸಿ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಮೇಲೆ ಹಲ್ಲೆ ಮಾಡಿ ಬಟ್ಟೆ ಹರಿದು ಹಾಕಿ ಬೆತ್ತಲೆಗೊಳಿಸಿದ್ದಾರೆ. ಪೊಲೀಸರು ಹರಸಾಹಸ ಮಾಡಿ ಶಾಸಕರನ್ನು ರಕ್ಷಿಸಿ ಕರೆದುಕೊಂಡು ಹೋಗಿದ್ದಾರೆ.
ಹಲ್ಲೆ ಮಾಡಿದವರಲ್ಲಿ ಬಿಜೆಪಿ ಮುಖಂಡರೂ ಇದ್ದಾರೆ ಎನ್ನಲಾಗಿದೆ. ಪಕ್ಷದ ಕೆಲವು ಮುಖಂಡರೊಂದಿಗೆ ಅರುಣ್ ನಾರಂಗ್ ಬಂದಾಗ ರೈತರು ಹಾಗೂ ಕೆಲವು ಬಿಜೆಪಿ ಮುಖಂಡರು ಆಕ್ರೋಶದಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಖಂಡಿಸಿದೆ. ಇಂತಹ ವರ್ತನೆ ತೋರಬಾರದು, ತಾಳ್ಮೆ ಕಳೆದುಕೊಳ್ಳಬಾರದು ಎಂದು ತಿಳಿಸಲಾಗಿದೆ.
ಶಾಸಕನಿಗೆ ರಕ್ಷಣೆ ಇಲ್ಲವೆಂದರೆ ಹೇಗೆ? ಇದನ್ನು ಕೊಲೆಗಡುಕ ದಾಳಿ ಎಂದು ಹೇಳಿದ ಅರುಣ್ ನಾರಂಗ್, ರಾಜ್ಯ ಸರ್ಕಾರವು ಇದರ ಹಿಂದೆ ಇರಬಹುದೆಂದು ನನಗೆ ಅನಿಸಿದೆ. ಸಮಗ್ರ ತನಿಖೆ ಅಗತ್ಯ. ನಾನು ಈಗ ಪಂಜಾಬ್ ಪೊಲೀಸರನ್ನು ನಂಬುವುದಿಲ್ಲ. ನಾನು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದೇನೆ. ಪಕ್ಷದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಅಥವಾ ಮೋದಿ ನನಗೆ ನಿರ್ದೇಶನ ನೀಡುತ್ತಾರೆ ಎಂದು ಹೇಳಿದ್ದಾರೆ.
ನನ್ನ ಮೇಲೆ ಹಲ್ಲೆ ಮಾಡಿದವರು ನಿಜವಾದ ರೈತರಲ್ಲ, ಅವರು ಯಾರಿಂದಲೋ ಪ್ರೇರಿತರಾಗಿ ಬಂದವರು. ಇದು ಕಿಸಾನ್ ಆಂದೋಲನ ಅಲ್ಲ, ಗೂಂಡಾಗಿರಿಯಾಗಿದೆ ಎಂದು ಕಿಡಿಕಾರಿದ್ದಾರೆ.