ಮೈಸೂರು: ಬಿಜೆಪಿಯಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ. ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ಸುದ್ದಿಗೋಷ್ಠಿ ನಡೆಸುತ್ತಿದ್ದರೆ ಇನ್ನೊಂದೆಡೆ ಶಾಸಕ ಯತ್ನಾಳ್ ಬಣ ವಕ್ಫ್ ವಿರುದ್ಧ ಹೋರಾಟ ಆರಂಭಿಸಿದೆ. ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಳಿ ನಡೆಸುವ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಬಿಜೆಪಿ ಕಾರ್ಯಕರ್ತರೇ ಆಗ್ರಹಿಸಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ಬಿ.ವೈ.ವಿಜಯೇಂದ್ರ ಬಣದಿಂದ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾರ್ಯಕರ್ತರು, ಸುದ್ದಿಗೋಷ್ಹಿ ಮಾಡುವ ಬದಲು ಮೊದಲು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಿಂದ ಏನೂ ಪ್ರಯೋಜನವಿಲ್ಲ. ಯತ್ನಾಳ್ ಅವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಪಕ್ಷದ ನಾಯಕರ ವಿರುದ್ಧವೇ ಪದೇ ಪದೇ ವಾಗ್ದಾಳಿ ನಡೆಸಿತ್ತಿರುವುದು ಸರಿಯಲ್ಲ. ಅವರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಮೊದಲು ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಗದ್ದಲವೆಬ್ಬಿಸಿದ್ದಾರೆ.