ಗದಗ: ಆರ್.ಎಸ್.ಎಸ್ ನಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಹಿರಿಯ ಕಾರ್ಯಕರ್ತರೊಬ್ಬರು ಆರ್.ಎಸ್.ಎಸ್ ಗಣವೇಷದಲ್ಲಿಯೇ ಬಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ್ ಎಂಬ ಬಿಜೆಪಿ ಕಾರ್ಯರ್ತ ಆರ್.ಎಸ್.ಎಸ್ ಗಣವೇಷಧಾರಿಯಾಗಿ ಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಸಮ್ಮುಖದಲ್ಲಿ ನಿಂಗಬಸಪ್ಪ ಕಾಂಗ್ರೆಸ್ ಸೇರಿದ್ದು, ಆರ್.ಎಸ್.ಎಸ್ ಕಪ್ಪು ಟೋಪಿ ತೆಗೆದು ಖಾದಿ ಗಾಂಧಿ ಟೋಪಿ ಹಾಕಿ ಬಳಿಕ ಕಾಂಗ್ರೆಸ್ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಲಾಯಿತು.
30 ವರ್ಷಗಳಿಂದ ಆರ್.ಎಸ್.ಎಸ್ ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ನಿಂಗಬಸಪ್ಪ, ಇದೀಗ ಏಕಾಏಕಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರಿದ್ದಾರೆ. ಅದು ಕೂಡ ಆರ್.ಎಸ್.ಎಸ್ ಗಣವೇಷದಲ್ಲಿಯೇ ವೇದಿಕೆಗೆ ಆಗಮಿಸಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ.