ಬೆಂಗಳೂರು: ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದು, ಗಲಾಟೆ ಆರಂಭಿಸಿರುವ ಪ್ರಸಂಗ ನಡೆದಿದೆ.
ಶಾಸಕ ಶಿವಲಿಂಗೆಗೌಡ ಎದ್ದುನಿಂತು ಮಾತನಾಡುತ್ತಿದ್ದಂತೆ ಬಿಜೆಪಿ ಸದಸ್ಯರು, ಗ್ಯಾರಂಟಿ ಯೋಜನೆಗಳ ಬಗ್ಗೆ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋಲಾಹಲ ಆರಂಭಿಸಿದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಚರ್ಚೆಗೆ ಅವಕಾಶ ನಿರಾಕರಿಸಿದರು.
ಪ್ರಶ್ನೋತ್ತರ ಕಲಾಪದ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು. ಇದಕ್ಕೆ ಸುಮ್ಮನಾಗದ ಬಿಜೆಪಿ ಸದಸ್ಯರಾದ ಮಾಜಿ ಸಿಎಂ ಬೊಮ್ಮಾಯಿ, ಆರ್.ಅಶೋಕ್, ಸಿ.ಸಿ.ಪಾಟೀಲ್, ಅಶ್ವತ್ಥನಾರಾಯಣ, ಈಗಲೇ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಬಿಜೆಪಿ ಸದಸ್ಯರ ನಡೆಗೆ ಗರಂ ಆದ ಸ್ಪೀಕರ್ ಪ್ರಶ್ನೋತ್ತರ ಕಲಾಪ ಆರಂಭವಾಗಿದೆ. ಉಳಿದ ಶಾಸಕರ ಪ್ರಶ್ನೆಗಳಿಗೆ ಬೆಲೆಯಿಲ್ಲವೇ? ಎಂದು ಗುಡುಗಿದರು.
ಈ ವೇಳೆ ಬಿಜೆಪಿ ಸದಸ್ಯರು ಗದ್ದಲ ಕೋಲಾಹಲ ನಡೆಸಿದ್ದಾರೆ. ಬಿಜೆಪಿ ಸದಸ್ಯರನ್ನು ಸಮಾಧಾನಪಡಿಸಲು ಮುಂದಾದ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಯತ್ನವೂ ವಿಫಲವಾಗಿದೆ.