ಮೀಸಲಾತಿ ಕುರಿತಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎನ್ನುವುದು ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಗಿದೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮೀಸಲಾತಿ ರದ್ದುಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದೆ. ಇದನ್ನೇ ನಂಬಿ ಅನೇಕರು ಶೇರ್ ಮಾಡಿದ್ದಾರೆ. ಬಿಜೆಪಿ ಬೆಂಬಲಿತ ಮಾಧ್ಯಮಗಳು ಕೂಡ ಈ ಸುದ್ದಿ ಭಿತ್ತರಿಸುತ್ತಿವೆ. ಆದರೆ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರ ಪೂರ್ಣ ಹೇಳಿಕೆ ಇರುವುದಿಲ್ಲ.
ಹೀಗಾಗಿ ಮೀಸಲಾತಿ ರದ್ದು ಮಾಡಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನುವುದು ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರು ಸೆಪ್ಟಂಬರ್ 10ರಂದು ನೀಡಿದ ಹೇಳಿಕೆಯಲ್ಲಿ ಮೀಸಲಾತಿ ರದ್ದು ಮಾಡುವುದಾಗಿ ಹೇಳಿಲ್ಲ.
“ಸಮಾನತೆ ಸಾರ್ವತ್ರಿಕವಾದಾಗ ನಾವು ಮೀಸಲಾತಿ ರದ್ಧತಿ ಬಗ್ಗೆ ಯೋಚಿಸುತ್ತೇವೆ. ಈಗ ಅಂತಹ ಸಮಾನತೆ ಇಲ್ಲ. ನಮ್ಮ ಸಮಸ್ಯೆ ಏನೆಂದರೆ ಭಾರತದ ಶೇಕಡ 90ರಷ್ಟು ಜನರಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ದೇಶದ ಉದ್ಯಮಿಗಳ ಪಟ್ಟಿ ಗಮನಿಸಿದಾಗ ಆದಿವಾಸಿಗಳು, ದಲಿತರು. ಒಬಿಸಿಗಳು ಕಾಣಸಿಗುವುದಿಲ್ಲ. ದೇಶದಲ್ಲಿ ಶೇಕಡ 50ರಷ್ಟು ಈ ವರ್ಗದವರು ಇದ್ದರೂ 200 ಉದ್ಯಮಿಗಳ ಪಟ್ಟಿಯಲ್ಲಿ ಒಬ್ಬ ಒಬಿಸಿಯ ಹೆಸರು ಇರಬಹುದು. ಇಂತಹ ಸಮಸ್ಯೆಗೆ ನಾವು ಪರಿಹಾರ ಕಂಡುಕೊಳ್ಳುತ್ತಿಲ್ಲ. ಮೀಸಲಾತಿ ತೆಗೆದು ಹಾಕಿದ ತಕ್ಷಣ ಎಲ್ಲವೂ ಸರಿಯಾಗುವುದಿಲ್ಲ. ಬೇರೆ ಮಾರ್ಗಗಳು ಕೂಡ ಇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಅವರ ಹೇಳಿಕೆಯ ಆಯ್ದ ಭಾಗ ಮಾತ್ರ ಬಳಸಿಕೊಂಡು ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ ಎನ್ನುವುದು ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಗಿದೆ.