
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹೋರಾಟದ ಎಚ್ಚರಿಕೆ ನೀಡಿರುವ ರಾಜ್ಯ ಬಿಜೆಪಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದೆ.
ಕರ್ನಾಟಕದ ಆರ್ಥಿಕತೆಯನ್ನು ದಿವಾಳಿಯನ್ನಾಗಿ”ಸಿದ್ದು”, ಕರ್ನಾಟಕವನ್ನು ಅರಾಜಕತೆಯ ನಾಡನ್ನಾಗಿ”ಸಿದ್ದು”, ಇವೇ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ತಮ್ಮ ಒಂದು ವರ್ಷದ ಆಡಳಿತದಲ್ಲಿ ಸಾಧಿ”ಸಿದ್ದು” ಎಂದು ಟ್ವೀಟ್ ಮೂಲಕ ಕಿಡಿಕಾರಿದೆ.
ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿರುವ ಕಾಂಗ್ರೆಸ್, ಲೋಕಾರ್ಪಣೆ ಎಂದರೇ ಮಚ್ಚು, ಲಾಂಗು, ತಲ್ವಾರ್ಗಳ ಪ್ರದರ್ಶನ, ಶಂಕುಸ್ಥಾಪನೆ ಎಂದರೆ ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರಗಳು ಎಂದು ಭಾವಿಸಿದಂತಿದೆ. ಈ ಪರಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು ಎಂದು ಆಕ್ರೋಶ ವ್ಯಕ್ತಪಡಿಸಿದೆ.