
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿಯ ದಂಗಲ್ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸ್ವ ಪಕ್ಷದಲ್ಲಿಯೇ ಸ್ವಾತಂತ್ರ್ಯವಿಲ್ಲದಂತಾಗಿದೆ. ಅವರ ಸಿಎಂ ಆಗುವ ಹಗಲುಕನಸಿನ ಆಸೆಗೆ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಸಚಿವರ ಮೂಲಕ ತಣ್ಣೀರು ಎರಚಿದ್ದಾರೆ. ದುರ್ಬಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಸಿದ್ದರಾಮಯ್ಯ ಬೆಂಬಲಿಗರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಟಾಂಗ್ ನೀಡಿದೆ.
ಅಧಿಕಾರದ ಮೂಲಕ ತಮ್ಮ ಸ್ವ ಕುಟುಂಬದ “ಕಲ್ಯಾಣ” ಮಾಡಿಕೊಂಡ ಸಿದ್ದರಾಮಯ್ಯ ಅವರು ಕೋರ್ಟ್ ಛೀಮಾರಿ ಹಾಕಿದರೂ ಕುರ್ಚಿಯಿಂದ ಏಳಲೂ ಸಿದ್ಧವಿಲ್ಲ! ಪಕ್ಷ ಕಟ್ಟಿದ ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡ್ ಕೂಡಾ ಮನ್ನಣೆ ನೀಡುತ್ತಿಲ್ಲ. ಡಿಕೆಶಿ ಅವರದ್ದು ಈಗ ತಿರುಕನ ಕನಸಾಗಿದೆ. ಅವರ ತಾಯಿ ಗೌರಮ್ಮ ಹೇಳಿದ ಭವಿಷ್ಯ ನಿಜವಾಗುತ್ತಿದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಡಿ.ಕೆ. ಶಿವಕುಮಾರ್ ಕುಳಿತುಕೊಳ್ಳಲು ವಲಸೆ ನಾಯಕ ಸಿದ್ದರಾಮಯ್ಯ ಎಂದಿಗೂ ಬಿಡುವುದಿಲ್ಲ ! Congress VS Congress ಕಿತ್ತಾಟ ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ಮಾರಕವಾಗುವುದು ಖಚಿತ-ನಿಶ್ಚಿತ-ಖಂಡಿತ ಎಂದು ಟೀಕಿಸಿದೆ.