ನವದೆಹಲಿ: ಅನ್ಯ ಪಕ್ಷದಿಂದ ಬಿಜೆಪಿಗೆ ಬರುವವರ ಪೂರ್ವಾಪರ ಪರಿಶೀಲನೆಗೆ ಹೊಸ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಅನುಮತಿ ನೀಡಿದರೆ ಮಾತ್ರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.
ಆಯಾರಾಂ, ಗಯಾರಾಂಗಳಿಗೆ ಬ್ರೇಕ್ ಹಾಕಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೊಸ ಸಮಿತಿ ರಚಿಸಿದ್ದು, ಈ ಸಮಿತಿಯು ಷರತ್ತು ವಿಧಿಸಿ ಪಕ್ಷಕ್ಕೆ ಬರುವವರನ್ನು ಅಥವಾ ಯಾವುದೋ ಉದ್ದೇಶವನ್ನು ಇಟ್ಟುಕೊಂಡು ಪಕ್ಷ ಸೇರ್ಪಡೆಯಾಗುವವರನ್ನು, ಪದೇಪದೇ ಪಕ್ಷ ಬದಲಿಸುವವರನ್ನು ಮೊದಲ ಹಂತದಲ್ಲಿಯೇ ತಿರಸ್ಕರಿಸಿ ಅವರ ಪಕ್ಷ ಸೇರ್ಪಡೆಗೆ ತಡೆ ನೀಡಲಿದೆ.
ಗೆಲ್ಲುವ ಕುದುರೆಗಳಿಗೆ, ಸಮುದಾಯಗಳ ಪ್ರಭಾವಿ ನಾಯಕರುಗಳಿಗೆ ಮಣೆ ಹಾಕಲಾಗುತ್ತದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷಾಂತರ ಪರ್ವ ಜೋರಾಗಲಿದೆ. ಹೀಗಾಗಿ, 3ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ವಲಸೆ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೊದಲು ಅವರ ಸಾಮರ್ಥ್ಯ, ಜನಪ್ರಿಯತೆ, ಕ್ರಿಯಾಶೀಲತೆ ಮೊದಲಾದವುಗಳ ಪರಿಶೀಲನೆಗೆ ಸ್ಕ್ರೀನಿಂಗ್ ಕಮಿಟಿ ರಚಿಸಿದೆ.
ಜನವರಿ 6ರಂದು ಸಮಿತಿಯ ಮೊದಲ ಸಭೆ ನಡೆಸಲಾಗುತ್ತದೆ. ಬಿಜೆಪಿ ಸೇರುವ ನಾಯಕರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಲಾಭವಾಗುತ್ತದೆಯೇ? ಅವರ ಪ್ರಭಾವದಿಂದ ಎಷ್ಟು ಸ್ಥಾನ ಗೆಲ್ಲಬಹುದು? ಅವರು ದೀರ್ಘಕಾಲ ಪಕ್ಷದಲ್ಲಿ ಉಳಿಯುತ್ತಾರೆಯೇ? ಒಂದು ವೇಳೆ ಸೋತರೆ ಮಾತೃ ಪಕ್ಷಕ್ಕೆ ವಾಪಸ್ ಆಗುವ ಸಾಧ್ಯತೆ ಇದೆಯೇ ಎಂಬ ಅಂಶಗಳನ್ನು ಗಮನಿಸಿ ಸೇರ್ಪಡೆ ಮಾಡಿಕೊಳ್ಳಲಾಗುತ್ತೆ.
ತತ್ವ, ಸಿದ್ಧಾಂತಗಳಿಗೆ ಹೊಂದಿಕೊಳ್ಳದ ನಾಯಕರನ್ನು ಸೇರಿಸಿಕೊಳ್ಳದಿರಲು ತೀರ್ಮಾನಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿ ಗ್ರೀನ್ ಸಿಗ್ನಲ್ ನೀಡಿದ ನಂತರ ಅನ್ಯ ಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ.