ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾವಾಗುತ್ತಿದ್ದಂತೆ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಪ್ರಕಟವಾದ ಬಹುತೇಕ ಸಮೀಕ್ಷೆಗಳ ಪ್ರಕಾರ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪುನಹ ಅಧಿಕಾರಕ್ಕೇರಲಿದೆ.
ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದ್ದು, ಕಾಂಗ್ರೆಸ್ ಗೆ ಮತ್ತೆ ಸೋಲಾಗಲಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಎಎಪಿ ಕೂಡ ತೀವ್ರ ಹಿನ್ನಡೆ ಅನುಭವಿಸಲಿದೆ ಎಂದು ಎಕ್ಸಿಟ್ ಪೋಲ್ ಗಳು ತಿಳಿಸಿವೆ.
ಸೋಮವಾರ ಸಂಜೆ ಬಿಡುಗಡೆಯಾದ ಎಕ್ಸಿಟ್ ಪೋಲ್ ಅಂಕಿಅಂಶಗಳ ಪ್ರಕಾರ ಭಾರತೀಯ ಜನತಾ ಪಕ್ಷವು ಸತತ ಏಳನೇ ಅವಧಿಗೆ ಗುಜರಾತ್ ಅನ್ನು ಉಳಿಸಿಕೊಳ್ಳುತ್ತದೆ ಮತ್ತು ಹಿಮಾಚಲ ಪ್ರದೇಶದಲ್ಲಿ ಅಭೂತಪೂರ್ವ ಎರಡನೇ ಅವಧಿಯನ್ನು ಗೆಲ್ಲುತ್ತದೆ. ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಿದೆ.
ಗುಜರಾತ್ 182 ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ 92 ಸ್ಥಾನಗಳು ಬೇಕಿದೆ. ಹಿಮಾಚಲದಲ್ಲಿ 68 ಸ್ಥಾನಗಳಿದ್ದು, ಬಹುಮತಕ್ಕೆ 35 ಸ್ಥಾನಗಳು ಬೇಕಿದೆ.
ಗುಜರಾತ್ ನಲ್ಲಿ ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆಯು ಬಿಜೆಪಿಗೆ 128 ರಿಂದ 148 ಸ್ಥಾನಗಳನ್ನು, ಕಾಂಗ್ರೆಸ್ 30 ರಿಂದ 42 ಸ್ಥಾನಗಳನ್ನು ಮತ್ತು ಎಎಪಿಗೆ 10 ಕ್ಕಿಂತ ಕಡಿಮೆ ಸ್ಥಾನಗಳನ್ನು ನೀಡಿದೆ.
ಟಿವಿ9 ಭಾರತ್ ವರ್ಷ್ ಸಮೀಕ್ಷೆಯು ಬಿಜೆಪಿಗೆ ಇದೇ ಸ್ಥಾನಗಳನ್ನು ನೀಡಿದೆ. ಬಿಜೆಪಿ 125 ರಿಂದ 130 ಸ್ಥಾನಗಳು. ಕಾಂಗ್ರೆಸ್ 40-50 ಸ್ಥಾನಗಳು, ಎಎಪಿ ಐದು ಸ್ಥಾನಗಳಿಗಿಂತ ಕಡಿಮೆ ಪಡೆಯುವ ನಿರೀಕ್ಷೆಯಿದೆ.
ಹಿಮಾಚಲ ಪ್ರದೇಶದಲ್ಲಿ ಟೈಮ್ಸ್ ನೌ ನವಭಾರತ್ ಇಟಿಜಿ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಗೆ ಗೆಲುವಿನ ದೊಡ್ಡ ಅಂತರದ ಭವಿಷ್ಯ ನುಡಿದಿದೆ. ಇದು ಪಕ್ಷಕ್ಕೆ 34 ರಿಂದ 42 ಸ್ಥಾನಗಳನ್ನು ನೀಡುತ್ತದೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಕಾಂಗ್ರೆಸ್ 30-40 ಸ್ಥಾನ, ಬಿಜೆಪಿಗೆ 24-34 ಸ್ಥಾನಗಳನ್ನು ನೀಡುತ್ತದೆ. ರಿಪಬ್ಲಿಕ್-ಪಿ ಮಾರ್ಕ್ ಬಿಜೆಪಿಗೆ ಒಲವು ತೋರಿದ್ದು, ಕಾಂಗ್ರೆಸ್‌ಗೆ 20-33 ಕ್ಕೆ ಹೋಲಿಸಿದರೆ ಬಿಜೆಪಿ 34 ರಿಂದ 39 ಸ್ಥಾನ ಗಳಿಸಲಿದೆ. ಟೈಮ್ಸ್ ನೌ ನವಭಾರತ್ ಬಿಜೆಪಿಗೆ 34 ರಿಂದ 42 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 24 ರಿಂದ 32 ಸ್ಥಾನ ಬರಬಹುದು ಎಂದು ತಿಳಿಸಿದೆ.